ಬೆಂಗಳೂರು: ಬಿತ್ತನೆ ಬೀಜಗಳ ದರ ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇದಕ್ಕೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ದರವಿದೆ ಎಂದು ಅಂಕಿ-ಅಂಶ ನೀಡಿ ತಿರುಗೇಟು ನೀಡಿದರು.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬಿತ್ತನೆ ಬೀಜಗಳ ದರ ಏರಿಕೆಯು ಎಲ್ಲ ರಾಜ್ಯಗಳಲ್ಲಿಯೂ ಆಗಿದ್ದು, ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಕಡಿಮೆ ಇದೆ. ಬಿತ್ತನೆ ಬೀಜ ಮಾರಾಟ ದರ ನಿಗದಿಪಡಿಸುವಾಗ ಖರೀದಿ ದರ ಹಾಗೂ ಎಪಿಎಂಸಿಯ ಗರಿಷ್ಠ ಮಾರಾಟ ದರ ಆಧಾರವಾಗಿ ಪರಿಗಣಿಸಲಾಗುತ್ತದೆ. 2022-23ನೇ ಸಾಲಿಗೆ ಹೋಲಿಸಿದಾಗ 2023-24ನೇ ಸಾಲಿನಲ್ಲಿ ವಿವಿಧ ಬೆಳೆಗಳ ಖರೀದಿ ದರಗಳಲ್ಲಿ ಗರಿಷ್ಠ ಶೇ.59.58 ರಷ್ಟು ವ್ಯತ್ಯಾಸವಾಗಿದೆ ಎಂದು ವಿವರಿಸಿದರು.
ಮಹಾರಾಷ್ಟ್ರದಲ್ಲಿ ಸೋಯಾಅವರೆ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಎಲ್-1 ದರವು 8500 ರು. ನಿಗದಿಯಾಗಿದ್ದು ಕರ್ನಾಟಕದಲ್ಲಿ 7270 ರು. ಇದೆ. ತೊಗರಿಗೆ ಮಹಾರಾಷ್ಟ್ರದಲ್ಲಿ 25 ಸಾವಿರವಿದ್ದು ರಾಜ್ಯದಲ್ಲಿ 17,900 ರು. ನಿಗದಿಪಡಿಸಲಾಗಿದೆ. ಹೆಸರು ಮತ್ತು ಜೋಳದ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಮಹಾರಾಷ್ಟ್ರದಲ್ಲಿ ಕ್ರಮವಾಗಿ 23,500 ಮತ್ತು 14 ಸಾವಿರವಿದ್ದು ಕರ್ನಾಟಕದಲ್ಲಿ ಕ್ರಮವಾಗಿ 18,600 ರು. ಮತ್ತು 12,500 ರು. ಇದೆ. ಇದನ್ನು ಪರಿಶೀಲಿಸಿದರೆ ರಾಜ್ಯದಲ್ಲಿ ಬಿತ್ತನೆ ಬೀಜಗಳ ದರ ಗಣನೀಯವಾಗಿ ಕಡಿಮೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಬಾರಿ ಹೆಸರು ಬೆಳೆಯ ಬಿತ್ತನೆ ಬೀಜಗಳ ಎಲ್-1 ದರವು ಶೇ.48.5, ಉದ್ದು ಬೆಳೆಯ ದರವು ಶೇ.37.72, ತೊಗರಿ ಬೆಳೆಯ ವಿವಿಧ ತಳಿಗಳ ಬಿತ್ತನೆ ಬೀಜಗಳ ದರದಲ್ಲಿ ಶೇ.28.29 ರಿಂದ 37.69 ರಷ್ಟು ಮತ್ತು ಜೋಳದ ಬೀಜದ ದರವು ಶೇ.7.66 ರಿಂದ ಶೇ.33.33ರಷ್ಟು ಹೆಚ್ಚಾಗಿರುತ್ತದೆ. ಸೋಯಾ ಅವರೆ ಬಿತ್ತನೆ ಬೀಜದ ದರವು ಪ್ರಸಕ್ತ ಶೇ.8ರಷ್ಟು ಕಡಿತಗೊಂಡಿದೆ. ಸೂರ್ಯಕಾಂತಿ ಬೀಜದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
2023-24ನೇ ಸಾಲಿನಲ್ಲಿ ಭೀಕರ ಬರಗಾಲದಿಂದಾಗಿ ರಾಜ್ಯದಲ್ಲಿ ಬೀಜೋತ್ಪಾದನೆ ಗಣನೀಯವಾಗಿ ಕುಂಠಿತವಾಗಿತ್ತು. ಬೀಜೋತ್ಪಾದಕರಿಂದ ಖರೀದಿಸುವ ಬಿತ್ತನೆ ಬೀಜದ ದರ ಸಹ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಬೀಜದ ಮಾರಾಟದ ದರ ಏರಿಕೆಯಾಗಿದೆ. ಈ ಮೊತ್ತವು ಬೀಜೋತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ವರ್ಗಾವಣೆಯಾಗಿರುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ಸೂಚಿದರು.