ಬೆಂಗಳೂರು,: ಲೋಕಸಭೆ ಚುನಾವಣೆ ಬಳಿಕ ಕರ್ನಾಟಕ ಸರ್ಕಾರ ಪತನ ಬಗ್ಗೆ ಏಕನಾಥ್ ಶಿಂಧೆ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಏಕನಾಥ್ ಶಿಂಧೆ ಭ್ರಮೆಯಲ್ಲಿದ್ದಾರೆ. ಯಾವ ಕಾರಣಕ್ಕೂ ಅಪರೇಷನ್ ಕಮಲ ಮಾಡಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲಿ ಆಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿಯೂ ‘ಇಂಡಿಯಾ’ ಮೈತ್ರಿಕೂಟ ಗೆಲ್ಲುತ್ತದೆ ಎಂದು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಲೋಕಸಭೆ ಚುನಾವಣೆ ಬಳಿಕ ಶಿಂಧೆ ಸರ್ಕಾರ ಇರುವುದೇ ಅನುಮಾನವಿದೆ. ಉದ್ಧವ್ ಠಾಕ್ರೆ ಬಗ್ಗೆ ಪ್ರಧಾನಮಂತ್ರಿ ಮೋದಿ ಯಾಕೆ ಮಾತನಾಡಿದರು? ಎಲ್ಲರೂ ಕೂಡ ಅವರವರ ಪಕ್ಷಕ್ಕೆ ಹೋಗುತ್ತಾರೆ. ಮಹಾ ಸರ್ಕಾರದ ಒರಿಜಿನಲ್ ಶಿವಸೇನಾ ನಾಯಕರು ಮರಳಿ ಬರುತ್ತಾರೆ ಎಂದು ಹೇಳಿದರು.
ಏಕನಾಥ್ ಶಿಂಧೆಗೆ ಮಾತನಾಡಲು ಸ್ವಾತಂತ್ರ್ಯ ಇದೆ, ಅವರು ಮಾತನಾಡುತ್ತಾರೆ. ಭಿನ್ನಮತ ಇದೆ ಎಂದು ಸರ್ಕಾರ ಬೀಳಿಸಲು ಆಗುತ್ತದೆಯೇ ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ಶಾಸಕರ ಅಸಮಾಧಾನ ಇದೆ, ಅದಕ್ಕಾಗಿ ಸರ್ಕಾರ ಬೀಳುವುದಿಲ್ಲ. ಅಭಿವೃದ್ಧಿ, ವರ್ಗಾವಣೆ ವಿಚಾರದಲ್ಲಿ ಸಮಸ್ಯೆಗಳು ಇರುತ್ತವೆ. ಇದಕ್ಕೆಲ್ಲ ಸರ್ಕಾರ ಬೀಳಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
4 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ. ಸರ್ಕಾರ ಉರುಳುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಹುದ್ದೆ ವಿಚಾರವಾಗಿ ನಮ್ಮಲ್ಲಿ ಜಗಳ ಇರುವುದು ನಿಜ. ಅದರೆ ಅದು ಪಕ್ಷದ ಆಂತರಿಕ ವಿಚಾರ. ಈ ವಿಚಾರವಾಗಿ ಮಹಾರಾಷ್ಟ್ರಕ್ಕೆ ಕರ್ನಾಟಕವನ್ನು ಹೋಲಿಕೆ ಮಾಡುವುದು ಬೇಡ ಎಂದಿದ್ದಾರೆ.