ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಲಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿಗೆ ಖಾತರಿಯಾಗಿದ್ದು, ಏನೇನೋ ಮಾತನಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ನೆಹರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ ಮಾಡಲು ದೇವರೇ ಕಳುಹಿಸಿದ್ದಾನೆ. 2047ರ ತನಕ ಸೇವೆ ಮಾಡಲು ದೇವರು ಕಳುಹಿಸಿದ್ದಾನೆ ಎಂದು ಮೋದಿ ಹೇಳುತ್ತಾರೆ ಎಂದರು.
ಸೋಲಿನ ಭೀತಿಯಿಂದ ಮೋದಿ ಏನೇನೋ ಮಾತನಾಡುತ್ತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು 60ನೇ ಪುಣ್ಯತಿಥಿ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ ಸಿದ್ದರಾಮಯ್ಯ ವಿಧಾನಸೌಧ ಆವರಣದಲ್ಲಿ ಪಂಡಿತ್ ನೆಹರೂ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದರು.
ಮೋದಿ ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುತ್ತಾರೆ. ಇದು ಕನಸಿನ ಮಾತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಮತಕ್ಕಾಗಿ ಹಿಂದೂ, ಮುಸ್ಲಿಮರನ್ನು ವಿಭಜಿಸಿ ಮಾತನಾಡುತ್ತಾರೆ. ಚುನಾವಣಾ ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ. ಅವರಿಗೆ ಬಹುತ್ವದಲ್ಲಿ ನಂಬಿಕೆಯೇ ಇಲ್ಲ ಎಂದು ಟೀಕಿಸಿದರು.