ಬೆಂಗಳೂರು: ದೇಶದಲ್ಲಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಎಲ್ಲಿ 20 ಕೋಟಿ ಉದ್ಯೋಗ? ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು,2014ರಲ್ಲಿ ಕೋಟಿಗಳ ಲೆಕ್ಕದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಹತ್ತು ವರ್ಷಗಳ ನಂತರ ಲಕ್ಷಗಳ ಲೆಕ್ಕದಲ್ಲಿ ಉದ್ಯೋಗ ನೀಡಿದ್ದನ್ನು ಸಾಧನೆ ಎಂದು ಬಿಂಬಿಸುತ್ತಿರುವುದು ತಮಾಷೆಯಾಗಿ ಕಾಣುತ್ತಿಲ್ಲವೇ? ಎಲ್ಲಿಯ 20 ಕೋಟಿ ಉದ್ಯೋಗಗಳು? ಎಂದರು.
ಎಲ್ಲಿಯ ರೋಜಗಾರ್ ಮೇಳದ ಲಕ್ಷಗಳ ಲೆಕ್ಕದ ಉದ್ಯೋಗಗಳು? ನಿಜ ಹೇಳಿ ಪ್ರಧಾನಮಂತ್ರಿಗಳೇ ನೀವು ಸೃಷ್ಟಿಸಿರುವ ಉದ್ಯೋಗಗಳ ಸಂಖ್ಯೆ ಎಷ್ಟು? ನರೇಂದ್ರ ಮೋದಿಯವರೇ, ನಿಮ್ಮದೇ ಸಚಿವ ಸಂಪುಟದ ಜಿತೇಂದರ್ ಸಿಂಗ್ ಅವರು 2022ರ ಜುಲೈ ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ 2014-15 ಮತ್ತು 2021 -22ರ ಅವಧಿಯ ನಡುವೆ ಕೇವಲ 7 ಲಕ್ಷ ಹೊಸ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿತ್ತು ಎಂದು ಹೇಳಿದ್ದರು. ಅಂತಿಮ ಸತ್ಯ ಇದೇ ಇರಬಹುದಾ? ಎಂದು ಪ್ರಶ್ನೆ ಮಾಡಿದ್ದಾರೆ.