ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಮತ ಪ್ರಮಾಣ ಹೆಚ್ಚಳ, ಮತದಾನ ಮಹತ್ವ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಹಾಗೂ ಪಪಂ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ವೇಳೆ ಕಡಿಮೆ ಮತದಾನವಾದ ಆರೇಳು ಬೂತ್‌ಗಳಲ್ಲಿ ಈ ಬಾರಿ ಹೆಚ್ಚಿನ ಮತದಾನಕ್ಕೆ ಪ್ರೇರಣೆ ನೀಡುವುದಕ್ಕಾಗಿ ಈ ಅಭಿಯಾನ ಆಯೋಜಿಸಲಾಗಿದೆ ಎಂದರು.
ಮತದಾನ ಪ್ರತಿಯೊಬ್ಬರ ಹಕ್ಕು. ದೇಶದ ಉಜ್ವಲ ಭವಿಷ್ಯಕ್ಕಾಗಿ ಮತ ಅತಿ ಅವಶ್ಯವಾಗಿದೆ. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಸ್ವತಂತ್ರವಾಗಿ, ವಿವೇಚನೆಯಿಂದ ಮತ ಚಲಾಯಿಸಿ. ಪಟ್ಟಣದ ಆಯ್ದ ಬೂತ್‌ಗಳಲ್ಲಿ ಪ್ರತಿ ದಿನ ಒಂದು ಗಂಟೆ ಬಿಎಲ್‌ಒ, ಪೌರ ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಂಚರಿಸಿ ಸಹಿ ಸಂಗ್ರಹದ ಮೂಲಕ ಜಾಗೃತಿ ಮೂಡಿಸಲಿದ್ದಾರೆ ಎಂದು ಹೇಳಿದರು.
ಉಪತಹಸೀಲ್ದಾರ್ ಎಂ.ಆರ್.ಹೆಬ್ಬಳ್ಳಿ, ಮಾಡ ಬನ್ನಿ ಮತದಾನ ಇದುವೇ ನಮ್ಮ ಶ್ರಮದಾನ ಎಂಬ ಹೊಸ ಕನಸು ಬಿತ್ತಿ ಸದೃಢ ದೇಶ ಕಟ್ಟೋಣ. ಅರ್ಹ ಮತದಾರರೆಲ್ಲರೂ ತಪ್ಪದೆ ಮತ ಚಲಾಯಿಸಿ, ಕುಟುಂಬ ಹಾಗೂ ನೆರೆಹೊರೆಯವರನ್ನೂ ಮತಗಟ್ಟೆಗೆ ಕರೆದುಕೊಂಡು ಬನ್ನಿ ಎಂದು ಕರೆ ನೀಡಿದರು.
ಕಂದಾಯ ನಿರೀಕ್ಷಕ ಡಿ.ಎಸ್.ಯತ್ನಟ್ಟಿ, ಜೆಎಚ್‌ಐ ಸಂತೋಷ ವ್ಯಾಪಾರಿಮಠ, ಗ್ರಾಮ ಆಡಳಿತಾಕಾರಿ ಸುರೇಶ ಹುದ್ದಾರ, ಅಂಗನವಾಡಿ ಮೇಲ್ವಿಚಾರಕಿ ದುರ್ಗಾ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಎಲ್‌ಒ, ಪಪಂ ಸಿಬ್ಬಂದಿ ಇದ್ದರು.