ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿ ಕಡ್ಡಾಯ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಫೆಬ್ರವರಿ 28 ರಂದು ಜರುಗಲಿರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್‍ನಲ್ಲಿ ಜರುಗಿದ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಭಾವಚಿತ್ರವಿರುವ ಚುನಾವಣಾ ಐಡಿ, ಆಧಾರ ಕಾರ್ಡ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ, ಪಾಸ್‍ಪೋರ್ಟ, ಸರ್ಕಾರಿ ನೌಕರರ ಐಡಿ ಇವುಗಳಲ್ಲಿ ಯಾವುದಾದರು ಒಂದನ್ನು ಕಡ್ಡಾಯವಾಗಿ ಹಾಜರಪಡಿಸತಕ್ಕದ್ದು. ಇಲ್ಲವಾದಲ್ಲಿ ಪರೀಕ್ಷಾ ಕೇಂದ್ರಕ್ಕೆ ಅನುಮತಿ ನೀಡಲು ಅವಕಾಶವಿರುವದಿಲ್ಲವೆಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 46 ಪರೀಕ್ಷಾ ಕೇಂದ್ರಗಳಲ್ಲಿ 18,487 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಾಗಲಕೋಟೆಯಲ್ಲಿ 33 ಪರೀಕ್ಷಾ ಕೇಂದ್ರಗಳಲ್ಲಿ 12,968 ಅಭ್ಯರ್ಥಿಗಳು, ಜಮಖಂಡಿಯ 12 ಕೇಂದ್ರಗಳಲ್ಲಿ 5016 ಅಭ್ಯರ್ಥಿಗಳು ಹಾಗೂ ಮುಧೋಳ 1 ಪರೀಕ್ಷಾ ಕೇಂದ್ರದಲ್ಲಿ 503 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು. ಪರೀಕ್ಷೆಗಳು ಬೆಳಗಿನ ಹಾಗೂ ಮಧ್ಯಾಹ್ನ ಎರಡು ಅವಧಿಯಲ್ಲಿ ನಡೆಯಲಿವೆ. ಪರೀಕ್ಷೆ ನಡೆಯುವ ಒಂದು ಗಂಟೆ ಮುಂಚಿತವಾಗಿ ಪರೀಕ್ಷೆಗೆ ಹಾಜರಾಬೇಕು. ಬೆಳಿಗ್ಗೆ 9.50ರ ನಂತರ ಮತ್ತು ಮದ್ಯಾಹ್ನ ಅವಧಿಯಲ್ಲಿ 1.50ರ ನಂತರ ಆಗಮಿಸುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ಇರುವದಿಲ್ಲವೆಂದು ತಿಳಿಸಿದರು.
ಪರೀಕ್ಷೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ರೀತಿಯ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷೆಗೆ ಮೊಬೈಲ್ ಪೋನ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದ್ದು, ಅವುಗಳನ್ನು ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಇಡಲು ಅಗತ್ಯ ವ್ಯವಸ್ಥೆ ಕಲ್ಪಿಸಿವಂತೆ ಅಧಿಕಾರಿಗಳಿಗೆ ತಿಳಿಸಿದರು. ಪರೀಕ್ಷೆಗೆ 16 ಜನ ಮಾರ್ಗಾಧಿಕಾರಿಗಳು, 12 ಜನ ವೀಕ್ಷಕ ಅಧಿಕಾರಿಗಳನ್ನು ನೇಮಿಸಲಾಗಿದೆ. 504ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಹಂಚಿಕೆಯಾದಲ್ಲಿ ಹೆಚ್ಚುವರಿ ಓರ್ವ ಮಲ್ವಿಚಾರಕನ್ನು ನೇಮಿಸಕೊಳ್ಳಬೇಕು. ಪ್ರತಿ 120 ಅಭ್ಯರ್ಥಿಗಳಿಗೆ ಒಬ್ಬ ಹೆಚ್ಚುವರಿ ಸಂವೀಕ್ಷಕರನ್ನು ನೇಮಿಸಲು ತಿಳಿಸಿದರು.
ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡ ಮುಖ್ಯ ಅಧೀಕ್ಷಕ, ವೀಕ್ಷಕರ, ಪ್ರಶ್ನೆ ಪತ್ರಿಕೆಗಳ ವಿತರಕರ ತಂಡ, ಪ್ರಶ್ನೆ ಪತ್ರಿಕೆ ಪಾಲಕರು ಮತ್ತು ಕಸ್ಟೋಡಿಯನ್, ಖಜಾನೆ ಇಲಾಖೆಯ ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯವನ್ನು ಜವಾಬ್ದಾರಿಯಿಂದ ಮಾಡಬೇಕು. ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆಗೆ ಕ್ರಮವಹಿಸಲಾಗುತ್ತದ್ದು, ಪರೀಕ್ಷಾ ಕೇಂದ್ರಗಳ ಸುತ್ತ 144 ಕಲಂ ದಡಿ ನಿಷೇಧಿತ ಪ್ರದೇಶವೆಂದು ಘೋಷಿಸಲು ಆದೇಶ ಹೊರಡಿಸಲಾಗುವುದೆಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ ಮಾತನಾಡಿ ಪರೀಕ್ಷೆಗೆ ಕೈಗೊಂಡ ಸಿದ್ದತೆ ಕುರಿತು ತಿಳಿಸಿದರು. ಕೋವಿಡ್ ಹಿನ್ನಲೆಯಲ್ಲಿ ಪರೀಕ್ಷಾ ಕೊಠಡಿಗಳನ್ನು ಸೋಂಕು ನಿವಾರಣಾ ದ್ರಾವಣದಿಂದ ಸೈನಿಟೈಜ್ ಮಾಡಲಾಗುತ್ತಿದೆ. ಪರೀಕ್ಷೆಗೆ ಬರುವ ಅಭ್ಯರ್ಥಿಗಳ ಆರೋಗ್ಯ ತಪಾಸಣೆ, ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಅರೇ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಉಪ ವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶೀಧರ ಪೂಜಾರಿ, ಭೂದಾಖಲೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ, ಪರೀಕ್ಷಾ ನೋಡಲ್ ಅಧಿಕಾರಿ ಎ.ಕೆ.ಬಸಣ್ಣವರ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.
ಪರೀಕ್ಷಾ ವೇಳಾಪಟ್ಟಿ ವಿವರ
ಜಿಲ್ಲೆಯಲ್ಲಿ ಫೆಬ್ರವರಿ 28 ರಂದು ಎಫ್‍ಡಿಎ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ 10 ರಿಂದ 11.30 ವರೆಗೆ ಸಾಮಾನ್ಯ ಜ್ಞಾನ, ಮಧ್ಯಾಹ್ನ 2 ರಿಂದ 3.30 ವರೆಗೆ ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲೀಷ ವಿಷಯಗಳ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಪ್ರಾರಂಭಕ್ಕಿಂದ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗತಕ್ಕದ್ದು. ಬೆಳಗಿನ ಅವಧಿಯಲ್ಲಿ 9.50ರ ನಂತರ ಮತ್ತು ಮದ್ಯಾಹ್ನ ಅವಧಿಯಲ್ಲಿ 1.50ರ ನಂತರ ಆಗಮಿಸುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ಇರುವದಿಲ್ಲ.