ಬಾಗಲಕೋಟೆ
ಜಿಲ್ಲಾ ನ್ಯಾಯಾಲಯದ ಅಧೀನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ 14747 ಪ್ರಕರಣಗಳ ಪೈಕಿ 11790 ಪ್ರಕರಣಗಳಿಗೆ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯ ನೇರಳೆ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಬಾಕಿ ಇರುವ 5996 ಮತ್ತು 8751 ವಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 14747 ಪ್ರಕರಣಗಳನ್ನು ವಿಚಾರಣೆಗಾಗಿ ತೆಗೆದುಕೊಳ್ಳಲಾಗಿದ್ದು, ಈ ಪೈಕಿ 11790 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ರಾಜೀ ಸಂಧಾನ ಮಾಡಲಾಯಿತು. ಈ ಎಲ್ಲ ಪ್ರಕರಣಗಳಿಗೆ ಒಟ್ಟು 24.60 ಕೋಟಿ ರೂ.ಗಳಿಗೆ ರಾಜೀ ಮಾಡಿಸಲಾಯಿತು.
ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಒಟ್ಟು 2326 ಪೈಕಿ 1673 ಪ್ರಕರಣಗಳು ಇತ್ಯರ್ಥವಾದರೆ, ಬೀಳಗಿ ಕೋರ್ಟನಲ್ಲಿ 115 ಪ್ರಕರಣಗಳ ಪೈಕಿ 64, ಮುಧೋಳ ಕೋರ್ಟನಲ್ಲಿ 613 ಪ್ರಕರಣಗಳ ಪೈಕಿ 451, ಬನಹಟ್ಟಿ ಕೋರ್ಟನಲ್ಲಿ 672 ಪ್ರಕರಣಗಳ ಪೈಕಿ 482, ಹುನಗುಂದ ಕೋರ್ಟನಲ್ಲಿ 365 ಪೈಕಿ 125, ಇಲಕಲ್ಲ ಕೋರ್ಟನಲ್ಲಿ 149 ಪೈಕಿ 109, ಜಮಖಂಡಿ ಕೋರ್ಟನಲ್ಲಿ 1077 ಪ್ರಕರಣಗಳ ಪೈಕಿ 742 ಹಾಗೂ ಬಾದಾಮಿ ಕೋರ್ಟನಲ್ಲಿ 678 ಪ್ರಕರಣಗಳ ಪೈಕಿ 503 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
ಕಾರ್ಯಕ್ರಮದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮೂಲಿಮನಿ, ಕುಟುಂಬ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶೆ ಪಲ್ಲವಿ ಆರ್, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶೆ ಹೇಮಾ ಪಸ್ತಾಪೂರ, 2ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ಮಹೇಶ ಪಾಟೀಲ, ಪ್ರಧಾನ ದಿವಾನಿ ನ್ಯಾಯಾಧೀಶ ಮುರುಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ, ಸೇರಿದಂತೆ ಕಕ್ಷಿದಾರರು, ವಕೀಲರು ಇದ್ದರು.