ನೇಹಾ ಹತ್ಯೆ:ಸ್ವಾಮೀಜಿಗಳ ಖಂಡನೆ
ಆರೋಪಿಗೆ ತಕ್ಕ ಶಿಕ್ಷೆಯಾಗಲಿ
ಬಾಗಲಕೋಟೆ
ಹುಬ್ಬಳ್ಳಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಮನುಕುಲಕ್ಕೆ ದೊಡ್ಡ ನೋವು ತಂದಿದ್ದು ತಪ್ಪಿತಸ್ಥನಿಗೆ ಕೊಡುವ ಶಿಕ್ಷೆ ಇಂತಹ ಕೃತ್ಯದಲ್ಲಿ ತೊಡಗಿರುವವರಿಗೆ ಎಚ್ಚರಿಕೆ ಗಂಟೆಯಾಗಬೇಕು ಎಂದು ಸ್ವಾಮೀಜಿಗಳು ಆಗ್ರಹಿಸಿದ್ದಾರೆ.
ಜಿಲ್ಲೆಯ ಅಮೀನಗಡದ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಾನಾ ಮಠದ ಸ್ವಾಮೀಜಿಗಳು, ಸರಕಾರ ಹಾಗೂ ಪೊಲೀಸ್ ಇಲಾಖೆ ವಿಳಂಬ ಮಾಡದೆ ಇಂತವರಿಗೆ ತಕ್ಕ ಶಿಕ್ಷೆ ಆಗಬೇಕು. ಆರೋಪಿಗೆ ನೀಡುವ ಶಿಕ್ಷೆ ಇತರರಿಗೆ ಎಚ್ಚರಿಕೆಯ ಗಂಟೆ ಆಗಬೇಕು ಎಂದು ಹೇಳಿದರು.
ಸ್ಥಳೀಯ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಮಾತನಾಡಿ, ಈ ಘಟನೆಯಿಂದ ದೇಶವೇ ತಲೆ ತಗ್ಗಿಸುವಂತಾಗಿದೆ. ಇಂದಿನ ಯುವಕರಲ್ಲಿ ಆಧ್ಯಾತ್ಮದ ಒಲವು ಕಡಿಮೆ ಆಗಿರುವುದಕ್ಕೆ ಇಂತಹ ಕೃತ್ಯ ನಡೆಯುತ್ತಿವೆ. ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರ ಹಾಗೂ ಧರ್ಮದ ಬಗ್ಗೆ ಒಲವು ಕಡಿಮೆಯಿಂದಾಗಿ ಇಂತಹ ಅಪರಾಧ ಕೃತ್ಯಗಳು ನಡೆಯುತ್ತವೆ. ದೇಶದ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆ ನಡೆಯಬಾರದು. ಮಕ್ಕಳೇ ದೇಶದ ಆಸ್ತಿ ಎನ್ನುವಾಗ ಮಕ್ಕಳಿಂದಲೇ ಕೃತ್ಯ ನಡೆದಿರುವುದು ಎಲ್ಲರಿಗೂ ನೋವಾಗಿದೆ. ಸರಕಾರ ಇಂತಹ ಘಟನೆಗಳಲ್ಲಿ ವಿಳಂಬಕ್ಕೆ ಅವಕಾಶ ನೀಡದೆ ಆರೋಪಿಗೆ ಶೀಘ್ರ ಶಿಕ್ಷೆ ಅಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಮಕ್ಕಳು ದೇಶದ ಸಂಪತ್ತು, ಅವರಿಂದಲೇ ಇಂತಹ ಕೃತ್ಯ ನಡೆಯಬಹುದು ಎಂಬ ಊಹೆಯೂ ಇರುವುದಿಲ್ಲ. ಈ ರೀತಿ ಆಗಬಾರದು. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.
ಪುರಗಿರಿಯ ಕೈಲಾಸಲಿಂಗ ಶಿವಾಚಾರ್ಯರು, ವಿಜಯಪುರದ ಹಿರೇಮಠದ ಪ್ರಶಾಂತ ದೇವರು,
ಚರಮೂರ್ತಿ ದೇವರು, ಉಪಪ್ರಾಚಾರ್ಯ ಆರ್.ಜಿ.ಸನ್ನಿ ಇದ್ದರು.