ಬಾಗಲಕೋಟೆ :
ಪಕ್ಷಾಂತರದ ಅವಶ್ಯಕತೆ ನಮಗೆ ಇಲ್ಲ, ಯಾರೇ ಬರುವವರು ಅವರಾಗಿಯೇ ನಮ್ಮ ಪಕ್ಷದ ಸಿದ್ದಾಂತಕ್ಕೆ ತಲೆಬಾಗಿ ಬಂದರೆ ಬೇಡ ಎನ್ನುವುದಿಲ್ಲ. ಯಾವುದೇ ಅಧಿಕಾರ ಬೇಡ ಎಂದು ಬರುವವರನ್ನು ಸ್ವಾಗತಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಜಿಲ್ಲೆಯ ಚಿಕ್ಕಸಂಶಿ ಗ್ರಾಮದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ವಿಚಾರಗಳನ್ನು ಮೆಚ್ಚಿಕೊಂಡು ಬರುವವರನ್ನು ನಾವು ಗೌರವಿಸುತ್ತೇವೆ. ಸಾಮಾನ್ಯವಾಗಿ ಸಿಎಂ ಮನೆಗೆ ಎಲ್ಲ ಶಾಸಕರು ಹೋಗಬಹುದು, ಸಿದ್ದರಾಮಯ್ಯನವರು ರಾಜ್ಯದ ಸಿಎಂ. ಅವರು ಬರೀ ಕಾಂಗ್ರೆಸ್‌ನವರಿಗೆ ಮುಖ್ಯಮಂತ್ರಿ ಅಲ್ಲ, ಅವರು ಎಲ್ಲ ಶಾಸಕರಿಗೂ ಸಿಎಂ ಆಗಿದ್ದಾರೆ ಎಂದರು.
ಈ ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ನಾವು ಸಹ ಅವರನ್ನು ಭೇಟಿ ಮಾಡಿದ್ದೇವೆ. ಹೀಗಾಗಿ ಶಾಸಕರು ಸಿಎಂ ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ, ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದರು.
ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರ ಮಾತನ್ನು ಯಾಕೆ ನೀವು ಸೀರಿಯಸ್ ತೆಗೆದುಕೊಳ್ಳುತ್ತೀರಿ? ಎಂಪಿ ಎಲೆಕ್ಷನ್ ಬಳಿಕವು ಕಾಂಗ್ರೆಸ್ ಶಾಸಕರು ಎಲ್ಲೂ ಹೋಗುವುದಿಲ್ಲ. ಬಿಜೆಪಿಯವರಿಗೆ 36% ಪರ್ಸೆಂಟ್ ವೋಟ್ ಬಂದಿದೆ. ನಮಗೆ ಬಿಜೆಪಿಗಿಂತ 7% ಹೆಚ್ಚಿಗೆ ಮತಗಳು ಬಂದಿವೆ. ಬಿಜೆಪಿಯವರಲ್ಲಿ ನಾಯಕತ್ವದ ಕೊರತೆ ಇದೆ, ಅಲ್ಲಿ ಮಾಸ್ ಲೀಡರ್ ಯಾರೂ ಇಲ್ಲ ಎಂದು ತಿರುಗೇಟು ನೀಡಿದರು.
ಮೊನ್ನೆ ಹಣಬಲ, ತೋಳ್ಬಲ ಹಾಗೂ ಅಧಿಕಾರದ ಬಲದಿಂದ 36% ಮತಗಳನ್ನು ಪಡೆದಿದ್ದಾರೆ. ಇನ್ನೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಡೌನ್ ಆಗುತ್ತಾ ಬರುತ್ತದೆ ಎಂದು ಟೀಕಿಸಿದರು.