ಬೆಂಗಳೂರು: ಪಡಿತರ ವಿತರಕರಿಗೆ ಪ್ರತಿ ಕೆಜಿ ಅಕ್ಕಿಗೆ ಕಮಿಷನ್ ಮೊತ್ತ ಒಂದೂವರೆ ರೂಪಾಯಿಗೆ ಹೆಚ್ಚಳಗೊಳಿಸಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು ಎಂದು ಮಾಹಿತಿ ತಿಳಿದು ಬಂದಿದೆ.
ಅರಮನೆ ಮೈದಾನದಲ್ಲಿ ನಡೆದ ಅನ್ನಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು. ಇವು ಕಾಂಗ್ರೆಸ್ ಜಾರಿಗೆ ತಂದಿದ್ದ ಹಸಿವು ಮುಕ್ತ ಭಾರತದ ಕಾರ್ಯಕ್ರಮಗಳು.
ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ, ಕಾಂಗ್ರೆಸ್ ಹಸಿವು ಮುಕ್ತ ನಾಡನ್ನು, ಹಸಿವು ಮುಕ್ತ ದೇಶವನ್ನು ನಿರ್ಮಿಸಲು ಹೊರಟಿದೆ ಎಂದರು.ಅನ್ನಭಾಗ್ಯ ಸೇರಿ ಬಡವರು, ಮಧ್ಯಮ ವರ್ಗದವರಿಗೆ ಕೊಟ್ಟ ಭಾಗ್ಯ ಆಡಿಕೊಂಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ದುರಂತ. ಇಂಥಾ ತಪ್ಪುಗಳನ್ನು ಮತ್ತೆ ಮತ್ತೆ ಮಾಡಬೇಡಿ, ಅನ್ನದಾತರು ದುಡಿದರೆ ದೇಶ ಬದುಕುತ್ತದೆ ಎಂದರು.
ನಾವು ತಲಾ 10 ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿ ಪ್ರತಿ ಕೆಜಿಗೆ 34 ರೂಪಾಯಿ ಕೊಡ್ತೀವಿ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದು, ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ ಅಕ್ಕಿ ಕೊಡಲಿಲ್ಲ. ಬಿಜೆಪಿ ಬಡವರ, ದುಡಿಯುವವರ, ಶ್ರಮಿಕರ ಪರವಾಗಿ ಇದ್ದಿದ್ದರೆ, ಈ ನಾಡಿನ ದಲಿತರು, ಶೂದ್ರರು ಮತ್ತು ಹಿಂದುಳಿದವರ ಪರವಾಗಿ ಇದ್ದಿದ್ದರೆ ಅಕ್ಕಿ ಕೊಡುತ್ತಿತ್ತು ಎಂದು ತಿಳಿಸಿದರು.