ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿ ತಂತ್ರ|
ಸಿನಿಮಿಯ ರೀತಿಯಲ್ಲಿ ಹೈಜಾಕ್‌ಗೆ ಯತ್ನ
ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಪಣ ಪಂಚಾಯಿತಿಯಲ್ಲಿ ಸುಲಭವಾಗಿ ಅಧಿಕಾರದ ಗದ್ದುಗೆಗೆ ಏರಬೇಕಿದ್ದ ಕಾಂಗ್ರೆಸ್ ಪಕ್ಷ ತನ್ನೊಳಗಿನ ಒಳ ಬೇಗುದಿಯಿಂದಾಗಿ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
16 ಸದಸ್ಯ ಬಲದಲ್ಲಿ ನಾಲ್ವರು ಕಾಂಗ್ರೆಸ್ ಸದ್ಯರಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮೀಸಲಾತಿಯಿಂದಾಗಿ ಮೂವರಿಗೆ ಅಧ್ಯಕ್ಷ ಗಾದಿಯ ಅದೃಷ್ಠ ಖುಲಾಯಿಸಿತ್ತು. ತಮ್ಮೊಳಗೆ ಸೂಕ್ತ ನಿರ್ಧಾರಕ್ಕೆ ಬಂದು ಸರದಿಯಂತೆ ಅಧ್ಯಕ್ಷ ಗಾದಿ ಪಡೆದು ಎರಡೂವರೆ ವರ್ಷ ಅಧಿಕಾರ ನಡೆಸಬಹುದಿತ್ತು.
ಆದರೆ ಇದೀಗ ಒಳ ಹೊಡೆತಕ್ಕೆ ಸಿಲುಕಿದ್ದು ಅಧಿಕಾರಕ್ಕೇರದಂತೆ ಮಾಡಿದೆ. ಪಕ್ಷದಲ್ಲಿನ ಕೆಲವರು ಇಂತಹ ಸಂದರ್ಭವನ್ನೇ ಎದುರು ನೋಡುತ್ತಿದ್ದು ಒಳಗೊಳಗೆ ಚಕ್ರವ್ಯೂಹ ಹೆಣೆಯಲು ಆರಂಭಿಸಿದರು. ಒಬ್ಬರಿಗೊಬ್ಬರು ಕಾಲೆಳೆಯುವ ಪ್ರಯತ್ನಕ್ಕೆ ಕೈ ಹಾಕಿದರು. ಎಲ್ಲರೂ ತಮ್ಮ ಹಠಕ್ಕೆ ಅಂಟಿಕೊAಡರು. ಹೀಗಾಗಿ 16 ಸದಸ್ಯರಲ್ಲಿ ಒಬ್ಬ ಪಕ್ಷೇತರರೊಂದಿಗೆ 8 ಸ್ಥಾನ ಹೊಂದಿದ್ದ ಬಿಜೆಪಿ ಇಲ್ಲಿ ತನ್ನ ಆಟ ಶುರು ಮಾಡಿತು.
ತಂತ್ರಕ್ಕೆ ಪ್ರತಿ ತಂತ್ರ
ಪಪಂನಲ್ಲಿ ಅಧಿಕಾರಕ್ಕೇರಲು ಬಹುಮತವಿದ್ದರೂ ಮೀಸಲಾತಿ ಆಟದಿಂದ ದೂರವಿದ್ದ ಬಿಜೆಪಿ, ಕಾಂಗ್ರೆಸ್‌ನಲ್ಲಿನ ಒಳ ಬೇಗುದಿಯ ಲಾಭ ಪಡೆಯಿತು. ಕಾಂಗ್ರೆಸ್‌ನಿಂದ ಬಂಡಾಯವೆದ್ದು ಸ್ಪರ್ಧೆ ಇಚ್ಚೆ ವ್ಯಕ್ತಪಡಿಸಿ ಬಿಜೆಪಿ ಸದಸ್ಯರ ಸಂಪರ್ಕಕ್ಕೆ ಬಂದವರಿಗೆ ಬೆಂಬಲ ವ್ಯಕ್ತಪಡಿಸಿತು. ಜತೆಗೆ ತಮ್ಮ ಪಕ್ಷದ ಅಭ್ಯರ್ಥಿ ಉಪಾಧ್ಯಕ್ಷ ಗಾದಿಗೇರುವಂತೆ ವ್ಯವಸ್ಥೆ ಮಾಡಿಕೊಂಡಿತು. ಮೀಸಲಾತಿ ಆಟದಿಂದ ಬಿಜೆಪಿಗರನ್ನು ಅಕಾರದಿಂದ ದೂರ ಉಳಿಯುವಂತೆ ಮಾಡುವ ಕಾಂಗ್ರೆಸ್ ಪಕ್ಷದ ತಂತ್ರಕ್ಕೆ ಬಿಜೆಪಿ ಭರ್ಜರಿ ಪ್ರತಿತಂತ್ರ ಹೂಡಿ ಅಕಾರಕ್ಕೇರುವಂತಾಯಿತು.
ಸದಸ್ಯರ ಅಪಹರಣಕ್ಕೆ ಯತ್ನ
ಅಧಿಕಾರ ಪಡೆಯುವ ತನ್ನ ಪ್ರಯತ್ನ ಮುಂದುವರೆಸಿದ ಕಾಂಗ್ರೆಸ್ ಪಕ್ಷ ಪಪಂ ಕಚೇರಿಯಲ್ಲಿ ಹೈಡ್ರಾಮಾವನ್ನೇ ಸೃಷ್ಠಿಸಿತು. ಕಚೇರಿ ಆವರಣ ಪ್ರವೇಶಿಸುವ ವೇಳೆ ಅಲ್ಲಿದ್ದ ಕಾಂಗ್ರೆಸ್ ಸದಸ್ಯರೊಬ್ಬರು ಬಿಜೆಪಿಯ ಒಬ್ಬ ಸದಸ್ಯನನ್ನು ಬಲವಂತವಾಗಿ ಬೇರೆಡೆ ಕರೆದೊಯ್ಯುವ ಪ್ರಯತ್ನ ನಡೆಸಿದರು. ಎಲ್ಲರ ಎದುರಿಗೆ ಸದಸ್ಯನನ್ನು ಬಲವಂತವಾಗಿ ಎಳೆದೊಯ್ಯುವುದು ಕಂಡು ಬಂದಿತು. ಕೂಡಲೆ ಎಚ್ಚೆತ್ತುಕೊಂಡ ಬಿಜೆಪಿ ಮುಖಂಡರು ತಮ್ಮ ಸದಸ್ಯನನ್ನು ಕಚೇರಿಯೊಳಗೆ ಕಳುಹಿಸುವಲ್ಲಿ ಯಶ್ವಿಯಾದರು. ಈ ವೇಳೆ ಕೆಲ ಕಾಲ ನೂಕಾಟ, ತಳ್ಳಾಟ ನಡೆಯಿತು. ಸಿನಿಮಿಯ ರೀತಿಯಲ್ಲಿ ನಡೆಯುತ್ತಿರುವ ಈ ಘಟನೆ ಕಂಡು ಜನ ಗಾಬರಿಯಾಗಿದ್ದರು.
ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ಸದಸ್ಯರು
ಚುನಾವಣೆ ಆರಂಭದಲ್ಲಿ ಕೆಲ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ನವರು ಸಂಪರ್ಕಿಸಿದ್ದಾರೆ. ಸಭೆಯೊಳಗೆ ಅವರ ನಿಲುವು ಏನಾಗಿರುತ್ತೋ ಎಂಬ ಅನುಮಾನ ಎಲ್ಲರನ್ನೂ ಕಾಡಿತ್ತು. ಆದರೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ 7 ಸದಸ್ಯರು ಹಾಗೂ ಬಿಜೆಪಿಗೆ ಕಳೆದೊಂದು ವರ್ಷದ ಹಿಂದೆಯೇ ಸೇರ್ಪಡೆಗೊಂಡಿದ್ದ ಪಕ್ಷೇತರ ಸದಸ್ಯೆ ಸೇರಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಪಕ್ಷ ನಿಷ್ಠೆ ಮೆರೆದರು. ಇದು ಮುಂದಿನ ಹಂತದ ಚುನಾವಣೆಗೆ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ನೀಡಿತು.
—–
ಬಂಜಾರಾ ಸಮುದಾಯಕ್ಕೆ ಕಳೆದ 30 ವರ್ಷದಿಂದ ಅವಕಾಶ ನೀಡದ ಕಾಂಗ್ರೆಸ್ ಆ ಸಮುದಾಯಕ್ಕೆ ಅನ್ಯಾಯವೆಸಗಿತ್ತು. ಅದಕ್ಕಾಗಿ ಬಿಜೆಪಿ ಪಕ್ಷ ಅಧ್ಯಕ್ಷ ಸ್ಥಾನ ದೊರಕಿಸುವ ಮೂಲಕ ಸಮುದಾಯಕ್ಕೆ ಗೌರವ ನೀಡಿದೆ.
–ಸುಜಾತಾ ತತ್ರಾಣಿ, ಪಪಂ ಸದಸ್ಯೆ.