ಬಾಗಲಕೋಟದಲ್ಲಿ ನಾಳೆ ಕಾಂಗ್ರೆಸ್ ಸಭೆ
ಕ್ಷೇತ್ರದೆಲ್ಲೆಡೆ ಕಾರ್ಯಕರ್ತರ ಸಭೆ ದಿನಾಂಕ ನಿಗದಿ ಪ್ರಚಾರ ಕಾರ್ಯ ಬಿರುಸು
ಬಾಗಲಕೋಟ: ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಕಾಂಗ್ರೆಸ್ ಪಕ್ಷ ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ಆಯೋಜಿಸಿದ್ದು, ಬಾಗಲಕೋಟ ವಿಧಾನಸಭಾ ಮತಕ್ಷೇತ್ರದ ಸಭೆ ಏಪ್ರಿಲ್ 7ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಚರಂತಿಮಠ ಕಲ್ಯಾಣ ಮಠದಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದ್ದಾರೆ.
ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಪಕ್ಷದ ಹಿರಿಯರು, ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಪಕ್ಷದ ಮುಖಂಡರನ್ನು ವೈಯಕ್ತಿಕವಾಗಿ ¨ಭೇಟಿ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇದೀಗ ಮತಕ್ಷೇತ್ರವಾರು ಸಭೆಗಳ ಮೂಲಕ ಪ್ರಚಾರ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಸಚಿವರು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಮಾಜಿ ಜಿಪಂ ಅಧ್ಯಕ್ಷರು, ಮುಂಚೂಣಿ ಘಟಕಗಳ ಮುಖ್ಯಸ್ಥರು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಸಮಿತಿಗಳು ಹಾಗೂ ಬ್ಲಾಕ್ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಗಳಲ್ಲಿ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಹುಮ್ಮಸ್ಸಿನಿಂದ ಪ್ರಚಾರ
ಕ್ಷೇತ್ರದಾದ್ಯಂತ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹುಮ್ಮಸ್ಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಯಕರ್ತರು ಅವರ ಅವರ ವಾರ್ಡ್ಗಳಲ್ಲಿ ಸಕ್ರಿಯರಾಗಿದ್ದಾರೆ. 20 ವರ್ಷಗಳ ನಂತರ ಬಾಗಲಕೋಟ ಲೋಕಸಭಾ ಕ್ಷೇತ್ರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬರುವುದರಲ್ಲಿ ಸಂದೇಹ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ಕಾಂಗ್ರೆಸ್ ಪಕ್ಷದ ಪ್ರಯತ್ನಕ್ಕೆ ಈ ಭಾರಿ ಫಲ ಸಿಗಲಿದೆ. ನಾಲ್ಕು ಅವಧಿಗೆ ಈ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ. ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಬಿಜೆಪಿ ಪ್ರಯತ್ನ ಫಲಿಸುವುದಿಲ್ಲ. ಬಿಜೆಪಿ ಪರವಾದ ಯಾವುದೇ ಅಲೆ ಇಲ್ಲ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಜ್ಯ ಕಾಂಗ್ರೆಸ್ ಗ್ಯಾರಂಟಿಗಳು ಈ ಚುನಾವಣೆಯಲ್ಲಿ ಕೈ ಹಿಡಿಯಲಿವೆ ಎಂದು ಹೇಳಿದರು.
ನಮ್ಮೊಂದಿಗೆ ಇದ್ದಾರೆ.
ಜಿಪಂ ಮಾಜಿ ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ್ ನಮ್ಮೊಂದಿಗೆ ಇದ್ದಾರೆ. ಬೆಂಬಲಿಗರ ಸಭೆ ನಡೆಸುವುದರಲ್ಲಿ ತಪ್ಪೇನೂ ಇಲ್ಲ. ಇದು ಪಕ್ಷ ಸಂಘಟನೆಗೆ ಪೂರಕವಾಗಲಿದೆ. ಖಂಡಿತ ಅವರು ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ ಪರವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಪಕ್ಷದ ವಿವಿಧ ಹುದ್ದೆಗಳಲ್ಲಿಕೆಲಸ ಮಾಡಿರುವ ಅವರು ಈಗ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ನಮ್ಮೊಂದಿಗೆ ಪ್ರಚಾರದಲ್ಲಿ ಭಾಗವಹಿಲಿಸದ್ದಾರೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ್ ಈ ವಿಚಾರವಾಗಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಇಬ್ಬರೂ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವೀಣಾ ಕಾಶಪ್ಪನವರ್ ಕಾಂಗ್ರೆಸ್ ತತ್ವ ಮತ್ತು ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಹೀಗಾಗಿ ಅವರು ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ. ಈ ಹಿಂದೆ ತಮಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆಗೆ ಅವಕಾಶ ಸಿಗದಿದ್ದಾಗ ರಾಮಕೃಷ್ಣ ಹೆಗೆಡೆ ಅವರು ಆಹ್ವಾನ ನೀಡಿದ್ದರು. ಆದರೆ ತಾವು ಹೆಗಡೆ ಅವರ ಆಹ್ವಾನವನ್ನು ಗೌರವದಿಂದಲೇ ನಿರಾಕರಿಸಿ ಪಕ್ಷದ ಶಿಸ್ತು ಪಾಲಿಸಿಕೊಂಡು ಬಂದೆ. ವೀಣಾ ಕಾಶಪ್ಪನವರ್ ಕೂಡಾ ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿದರು.
ಸಭೆ ಎಂದು? ಎಲ್ಲಿ?
7.4.24 ಬೆಳಗ್ಗೆ 11ಕ್ಕೆ ಬಾಗಲಕೋಟ ಚರಂತಿಮಠ ಕಲ್ಯಾಣ ಮಂಟಪ
10.4.24 ಬೆಳಗ್ಗೆ 11ಕ್ಕೆ ನರಗುಂದದ ಬಸವೇಶ್ವರ ಕಲ್ಯಾಣ ಮಂಟಪ
10.4.24 ಸಂಜೆ 4 ಬಾದಾಮಿಯ ಕಾಳಿದಾಸ ಹೈಸ್ಕೂಲ್ ಆವರಣ
12.4.24 ಸಂಜೆ 4 ತೇರದಾಳ
13.4.24 ಬೆಳಗ್ಗೆ 11ಕ್ಕೆ ಬೀಳಗಿ
13.4.24 ಸಂಜೆ 4ಕ್ಕೆ ಮುಧೋಳ
14.4.24 ಬೆಳಗ್ಗೆ 11ಕ್ಕೆ ಜಮಖಂಡಿ
15.4.24. ಸಂಜೆ 4 ಹುನಗುಂದ
ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್
ಬಾಗಲಕೋಟ: ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಮನವಿ ಮಾಡಿದರು.
ಶನಿವಾರ ವಿದ್ಯಾಗಿರಿಯ ಸಾಯಿ ಸಾಯಿಬಾಬಾ ಮಂದಿರ ಮತ್ತು ಮುಚಖಂಡಿ ರಸ್ತೆಯ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ನಂತರ ನೆರೆದಿದ್ದ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿನ ಅಂಶಗಳನ್ನು ಮನೆ ಮನೆಗೆ ತಲುಪಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ ಎಂದು ಮನವಿ ಮಾಡಿದರು.
ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಚಾರ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತದಾರರು ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಗೆಲ್ಲಲೇಬೇಕು ಎಂಬ ಹಠ ಕಾರ್ಯಕರ್ತರಲ್ಲಿ ಬಂದಿದೆ. ಅವರ ನಿರೀಕ್ಷೆ ಹುಸಿಯಾಗುವುದಿಲ್ಲ ಎಂದು ಹೇಳಿದರು