ಯಾದಗಿರಿ: ನಿಜಾಂ ಸರ್ಕಾರದ ಆಡಳಿತದಲ್ಲೇ ಹೆಣ್ಣುಮಕ್ಕಳ ಮಾಂಗಲ್ಯಕ್ಕೆ ಕೈ ಹಾಕುವ ಧೈರ್ಯ ಇರಲಿಲ್ಲ. ಈಗ ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವಿದ್ದು, ಮಹಿಳೆಯರ ಮಂಗಳಸೂತ್ರಕ್ಕಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಾಣ ಕೊಡಲೂ ಸಿದ್ಧವಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಗುರುಮಠಕಲ್ ನಲ್ಲಿ ಅವರು ಮತಯಾಚನೆ ನಡೆಸಿದರು. ಮಂಗಳಸೂತ್ರ ವಿಚಾರವಾಗಿ ಮೋದಿ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, ಯಾರಿಗೆ ಮಕ್ಕಳು ಜಾಸ್ತಿ ಇದ್ದಾರೆ ಅವರಿಗೆ ಸಂಪತ್ತು ಜಾಸ್ತಿ ಹೋಗುತ್ತೆ ಎಂದು ಮೋದಿ ಹೇಳಿದ್ದಾರೆ. ಅವರಿಗೆ ಮಕ್ಕಳಿಲ್ಲ ಎಂದರೆ ನಾವೇನು ಮಾಡೋಣ ಎಂದು ಪ್ರಶ್ನಿಸಿದರು.
ಖರ್ಗೆ ಅಳಿಯ ರಾಧಾಕೃಷ್ಣ ಕಣದಲ್ಲಿರುವ ಕಲಬುರಗಿ ಮೀಸಲು ಲೋಕಸಭೆ ಅಖಾಡಕ್ಕೆ ದೇಶದ ಪ್ರಮುಖ ಕಾಂಗ್ರೆಸ್ ನಾಯಕರೆಲ್ಲರೂ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ವಾರವಷ್ಟೇ ರಾಜ್ಯದ ಸಿಎಂ, ಡಿಸಿಎಂ, ಇಲ್ಲಿಗೆ ಬಂದು ಪ್ರಚಾರ ಮಾಡಿ ಹೋದ ಬೆನ್ನಲ್ಲೇ ಸೋಮವಾರ ಇಲ್ಲಿಗೆ ಎಐಸಿಸಿ ಅಧ್ಯಕ್ಷ ಡಾ. ಖರ್ಗೆ, ಪ್ರ. ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸುರ್ಜೇವಾಲಾ ಆಗಮಿಸಿ ಅಬ್ಬರಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ಮುಖ್ಯಮಂತ್ರಿ ಅನುಮುಲ ರೇವಂತರೆಡ್ಡಿ, ಡಾ.ಶರಣಪ್ರಕಾಶ ಪಾಟೀಲ, ರಣಜೀತ ಸಿಂಗ್ ಸುರ್ಜೇವಾಲಾ ಎಲ್ಲರು ಸೇಡಂ ಪಟ್ಟಣದಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ 10 ವರ್ಷದ ಬಿಜೆಪಿ ಸರಕಾರದ ಆಡಳಿತದಿಂದ ದೇಶದಲ್ಲಿರುವ 22 ಜನ ಉದ್ಯಮಿಗಳು ಮಾತ್ರ ಆರ್ಥಿಕವಾಗಿ ಉದ್ಧಾರವಾಗಿದ್ದಾರೆ. ಆದರೆ, ಕಾರ್ಮಿಕರು, ರೈತರು, ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲಿಲ್ಲ ಎಂದು ಅವರು ಅಕ್ರೋಶ ವ್ಯಕ್ತ ಪಡಿಸಿದರು. ಮೋದಿಯವರು ಕಾಂಗ್ರೆಸ್ ಪಕ್ಷ ಹಾಗೂ ನಾಯಕರನ್ನು ಬೈಯ್ಯುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಅವರು ಬೈದಷ್ಟೂ ನಮಗೆ ಒಳ್ಳೆಯದಾಗುತ್ತದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಹಾಗೂ ನನಗೆ ಬೈಯುತ್ತಲೇ ಇರುತ್ತಾರೆ. ನಮಗೆ ಬೈಯುವ ಬದಲು ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಅವರು ವಿವರಿಸಲಿ ಎಂದು ಖರ್ಗೆ ಆಗ್ರಹಿಸಿದರು.