ಬೆಂಗಳೂರು: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಜೊತೆಗೆ ರಾಜ್ಯದಲ್ಲಿ ಪ್ರಚಾರದ ತಂತ್ರವನ್ನೂ ಬದಲಿಸಲು ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡಿದೆ. ಈಗಾಗಲೇ ಪ್ರಧಾನಿ ಮೋದಿ ಎರಡು ಬಾರಿ ಕರ್ನಾಟಕ್ಕೆ ಬಂದು ಅಬ್ಬರದ ಪ್ರಚಾರ ಮಾಡಿ ಹೋಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಇದೀಗ ಪ್ರಧಾನಿ ಅಬ್ಬರ ತಗ್ಗಿಸಲು ಕಾಂಗ್ರೆಸ್ ಹೊಸ ತಂತ್ರ ಹೆಣೆದಿದ್ದು, ಮೋದಿ ಗೆಲುವಿನ ಓಟಕ್ಕೆ ತಡೆಯೊಡ್ಡಬೇಕು. ಮತದಾರರು ಬಿಜೆಪಿ ಕಡೆ ವಾಲದಂತೆ ತಡೆಯಬೇಕು ಎಂಬ ಗುರಿ ಇಟ್ಟುಕೊಂಡು ಕಾಂಗ್ರೆಸ್ ಹೊಸ ತಂತ್ರ ರೂಪಿಸುತ್ತಿದೆ. ರಾಜ್ಯದಲ್ಲಿ ಈಗಾಗಲೇ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್, ಮೋದಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ತಯಾರಿ ಮಾಡಿದೆ.
ಈಗಾಗಲೇ ಎರಡೆರಡು ಜೋಡೋ ಯಾತ್ರೆಗಳ ಮೂಲಕ ಲೋಕಸಭೆ ರಣರಂಗದಲ್ಲಿ ರಾಹುಲ್ ಗಾಂಧಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರಿಂದಲೇ ಪ್ರಚಾರ ಆರಂಭಿಸಲು ಕಾಂಗ್ರೆಸ್ ಚಿಂತನೆ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ದೇಶಕ್ಕೆ ಸಂದೇಶ ಕೊಟ್ಟ ರೀತಿ, ಕರ್ನಾಟಕದಿಂದ ಹೊಸ ಸಂದೇಶ ರವಾನೆ ಮಾಡುವ ಲೆಕ್ಕಾಚಾರ ಕೈ ನಾಯಕರದ್ದಾಗಿದೆ. ಈ ಕುರಿತು ಸಿಎಂ ಮತ್ತು ಡಿಸಿಎಂ ಜೊತೆ ಬಸವರಾಜ್ ರಾಯರೆಡ್ಡಿ, ಜಿಸಿ, ಚಂದ್ರಶೇಖರ್ ಸೇರಿದಂತೆ ಹಲವು ನಾಯಕರು ಮಾತುಕತೆ ನಡೆಸಿದ್ದಾರೆ.
ಕರ್ನಾಟಕದಲ್ಲಿ ರಾಹುಲ್ ಗಾಂಧಿ ಕರೆಸಿ ಪ್ರಚಾರ ಆರಂಭಿಸಲು ಯೋಜನೆ ರೂಪಿಸಲಾಗಿದ್ದು, ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಲೋಕಸಭೆ ಪ್ರಚಾರ ಕಾರ್ಯ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಚಾರ ನಡೆಯಲಿದ್ದು, ಬಸವಕಲ್ಯಾಣ ಅಥವಾ ಕುರುಡುಮಲೆ ದೇವಸ್ಥಾನದಿಂದ ಪ್ರಚಾರಕ್ಕೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಈ ಪ್ರಚಾರಕ್ಕೆ ಚಾಲನೆ ನೀಡಲು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ನೀಡುವ ಮೂಲಕ ಸಂದೇಶ ರವಾನಿಸಲು ಸಿದ್ಧತೆ ಮಾಡಲಾಗಿದೆ ಎಂದು ಮಾಹಿತಿ ಕಂಡು ಬಂದಿದೆ.