ಬೆಂಗಳೂರು: ಇಂಡಿ ಮೈತ್ರಿ ಒಕ್ಕೂಟ ಕೇಂದ್ರ ದಲ್ಲಿ ಅಧಿಕಾರಕ್ಕೆ ಬಂದಲ್ಲಿ ಟಕಾ ಟಕ್ ಗ್ಯಾರಂಟಿ ಯೋಜನೆಯಡಿ ವಾರ್ಷಿಕ 1 ಲಕ್ಷ ನೀಡಲಾಗುವುದು ಎಂಬ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಹಿನ್ನೆೆಲೆಯಲ್ಲಿ ಬ್ಯಾಂಕ್ ಖಾತೆ ಮಾಡಿಸಲು ಮಹಿಳೆಯರು ಅಂಚೆ ಕಛೇರಿಯಲ್ಲಿ ಮುಗಿ ಬಿದ್ದಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಾಧ್ಯಮ ವರದಿಯನ್ನು ಲಗತ್ತಿಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಜನರ ಬಡತನವನ್ನು ಬಂಡವಾಳ ಮಾಡಿಕೊಂಡು ಬೊಗಳೆ ಬಿಡುವುದು, ಅಮಾಯಕರನ್ನು ದಿಕ್ಕು ತಪ್ಪಿಸುವುದು, ಸ್ವಾತಂತ್ರ್ಯಾ ನಂತರದಿಂದಲೂ ಕಾಂಗ್ರೆಸ್ ಅನುಸರಿಸಿಕೊಂಡು ಬಂದಿರುವ ಚಾಳಿ ಎಂದು ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬಿಟ್ಟಿ ಭಾಗ್ಯಗಗಳನ್ನೇ ಮುಂದಿಟ್ಟುಕೊಂಡು ಇಡೀ ದೇಶದ ಮತದಾರರಿಗೆ, ಅದರಲ್ಲೂ ಮಹಿಳೆಯರಿಗೆ ಟೋಪಿ ಹಾಕಲು ಹೋಗಿ ರಾಹುಲ್ ಗಾಂಧಿ ಬಾಯಿಂದ ಹೊರಟ ‘ವಾರ್ಷಿಕ 1 ಲಕ್ಷ ಹಾಗೂ ತಿಂಗಳಿಗೆ 8 ಸಾವಿರ ರೂ ಕೊಡುತ್ತೇವೆಂಬ’ ಚುನಾವಣಾ ಪ್ರಚಾರದ ‘ಟಕಾಟಕ್’ ಡೋಂಗಿ ಡೈಲಾಗ್ ನಂಬಿ ಬೆಂಗಳೂರಿನಲ್ಲಿ ನಿದ್ರೆಗೆಟ್ಟು ಮಹಿಳೆಯರು ಬೆಳಗಿನ ಜಾವ 4 ಗಂಟೆಗೆ ಸರತಿ ಸಾಲಿನಲ್ಲಿ ನಿಂತು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಮುಗಿಬಿದ್ದಿರುವ ಘಟನೆ ನಿಜಕ್ಕೂ ಬೇಸರ ತರಿಸುವಂತದ್ದು ಎಂದರು.
ಕಾಂಗ್ರೆಸ್ ಬಡಜನರೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ವಾಸ್ತವ ತಿಳಿಸಿ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದರು.