ಬೆಂಗಳೂರು: ಸಂವಿಧಾನವು ಎಲ್ಲ ಧರ್ಮಗ್ರಂಥಗಳಿಗಿಂತ ಶ್ರೇಷ್ಠತೆ ಪಡೆದಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಹೇಳಿದರು.
ಗಣರಾಜೋತ್ಸವದ ಪ್ರಯುಕ್ತ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಧ್ವಜಾರೋಹಣದ ನಂತರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇವತ್ತು ದೇಶದ ಉದ್ದಗಲಕ್ಕೆ ಶ್ರದ್ಧೆ- ಭಕ್ತಿ- ಆಸಕ್ತಿಯಿಂದ ಎಲ್ಲರೂ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ದೇಶದ ನಾಗರಿಕರಿಗೆ ಹಕ್ಕು ಮತ್ತು ಜವಾಬ್ದಾರಿಯನ್ನು ನೀಡಿದ ಪವಿತ್ರವಾದ, ಮಹತ್ವದ ದಿನವಿದು ಎಂದು ತಿಳಿಸಿದರು.
ನಮ್ಮ ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವುಳ್ಳ ರಾಷ್ಟ್ರ ಎಂದು ನಾವೆಲ್ಲ ಅತ್ಯಂತ ಹೆಮ್ಮೆಯಿಂದ ಹೇಳುತ್ತೇವೆ. ಎಲ್ಲ ಹಂತದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕಾರ್ಯವನ್ನು ನಾವು- ನೀವು ಮಾಡಬೇಕಿದೆ ಎಂದು ವಿವರಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಅವರು ಮಾತನಾಡಿ, ನಮ್ಮೆಲ್ಲರ ಜವಾಬ್ದಾರಿಯನ್ನು ನೆನಪಿಸುವ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತಿದ್ದು, ಸ್ವಾತಂತ್ರ್ಯ ಬಂದ ನಂತರ ಭಾಷಾವಾರು ಪ್ರಾಂತಗಳಾಗಿ ವಿಂಗಡನೆ ಆಗಿದ್ದ ನಮ್ಮೆಲ್ಲರನ್ನು ಕೂಡ ಸಂವಿಧಾನವು ಒಂದುಗೂಡಿಸಿತು. ನಮ್ಮೆಲ್ಲರ ಜವಾಬ್ದಾರಿ ಮತ್ತು ಹಕ್ಕುಗಳನ್ನು ಆ ಸಂವಿಧಾನದಲ್ಲಿ ತಿಳಿಸಲಾಗಿತ್ತು ಎಂದು ಸೂಚಿಸಿದರು.