ಕೋಲ್ಕೊತಾ: ಭಾನುವಾರ ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ವಿರಾಟ್ ಕೊಹ್ಲಿಗೆ(Virat Kohli) ವಿಶೇಷವಾಗಿದೆ. ಏಕೆಂದರೆ ಕೊಹ್ಲಿ(Virat Kohli birthday) ಅವರ 35ನೇ ಜನ್ಮದಿನಾಚರಣೆ. ಹೀಗಾಗಿ ಈ ಪಂದ್ಯ ಅವರಿಗೆ ವಿಶೇಷ ಮತ್ತು ಸ್ಮರಣೀಯವಾಗಿರಲಿದೆ. ಸದ್ಯ 48 ಏಕದಿನ ಶತಕ ಬಾರಿಸಿರುವ ಕೊಹ್ಲಿ ತಮ್ಮ ಜನ್ಮದಿದಂದೇ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ಅವರ ಸರ್ವಾಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟಲಿ ಎನ್ನುವುದು ಕೊಹ್ಲಿ ಅಭಿಮಾನಿಗಳ ಆಶಯವಾಶವಾಗಿದೆ.
70 ಸಾವಿರ ಮಾಸ್ಕ್ ವಿತರಣೆ
ವಿರಾಟ್ ಕೊಹ್ಲಿಯ ಜನ್ಮದಿನವಾದ ಕಾರಣ ಬಂಗಾಳ ಕ್ರಿಕೆಟ್ ಮಂಡಳಿ ವಿನೂತನ ಶೈಲಿಯ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಪಂದ್ಯ ನಡೆಯುವ ವೇಳೆ 70 ಸಾವಿರ ಕೊಹ್ಲಿಯ ಫೋಟೊ ಇರುವ ಮಾಸ್ಕ್ಗಳನ್ನು ಅಭಿಮಾನಿಗಳಿಗೆ ಉಚಿತವಾಗಿ ವಿತರಿಸಲಿದೆ. ಬರುವ ಅಭಿಮಾನಿಗಳೆಲ್ಲ ಕೊಹ್ಲಿ ಅವರನ್ನು ಪ್ರೋತ್ಸಾಹಿಸಬೇಕೆನ್ನುವುದು ಇದರ ಉದ್ದೇಶವಾಗಿದೆ. ಇದು ಮಾತ್ರವಲ್ಲದೆ ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ಕೇಕ್ ಕತ್ತರಿಸುವ ಯೋಜನೆಯನ್ನೂ ಬಂಗಾಳ ಸಂಸ್ಥೆ ಮಾಡಿದೆ.
ಕೊಹ್ಲಿ ಸಾಧನೆ
ವಿರಾಟ್ ಕೊಹ್ಲಿ ಅವರು ಇದುವರೆಗೆ ಒಟ್ಟು 288* ಏಕದಿನ ಪಂದ್ಯಗಳನ್ನು ಆಡಿ 58.27 ರ ಸರಾಸರಿಯಲ್ಲಿ 13,525 ರನ್ ಗಳಿಸಿದ್ದಾರೆ. ಇದರಲ್ಲಿ 48* ಶತಕ ಮತ್ತು 71 ಅರ್ಧಶತಕ ಒಳಗೊಂಡಿದೆ. ಬೌಲಿಂಗ್ನಲ್ಲೂ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್ನಲ್ಲಿ 111 ಪಂದ್ಯಗಳಲ್ಲಿ 8676 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಲ್ತಿಕ ಮೊತ್ತಾವಾಗಿದೆ. 115 ಟಿ20 ಪಂದ್ಯವಾಡಿ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ.
ಬೌಲಿಂಗ್ ಅನುಭವ
ವಿರಾಟ್ ಕೊಹ್ಲಿ ಕೂಡ ಬೌಲಿಂಗ್ ಅನುಭವವನ್ನು ಹೊಂದಿದ್ದಾರೆ. 2015ರ ವಿಶ್ವಕಪ್ನಲ್ಲಿ ಆಸೀಸ್ ವಿರುದ್ಧ ಮತ್ತು ಇದಕ್ಕೂ ಮುನ್ನ 2011ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೌಲಿಂಗ್ ನಡೆಸಿದ್ದರು. ಇಲ್ಲಿ ತಲಾ ಓವರ್ ಬೌಲಿಂಗ್ ನಡೆಸಿ ವಿಕೆಟ್ ಪಡೆಯದಿದ್ದರೂ ಉತ್ತಮ ರನ್ ಕಂಟ್ರೋಲ್ ಮಾಡಿದ್ದರು. ಅಲ್ಲದೆ ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಅವರ ಓವರ್ ಕೂಡ ಕೊಹ್ಲಿಯೇ ಪೂರ್ಣಗೊಳಿಸಿದ್ದರು. ಏಕದಿನದಲ್ಲಿ ಕೊಹ್ಲಿ 4 ವಿಕೆಟ್, ಟಿ20 ಮತ್ತು ಐಪಿಎಲ್ನಲ್ಲಿಯೂ ತಲಾ 4 ವಿಕಟ್ ಪಡೆದ ಸಾಧನೆ ಮಾಡಿದ್ದಾರೆ.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ, ಶುಭಮನ್ ಗಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಸ್ಸಿ ವಾನ್ ಡರ್ ಡುಸೆನ್, ಐಡೆನ್ ಮಾರ್ಕ್ರಮ್, ಟೆಂಬ ಬವುಮಾ, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್ಗಿಡಿ, ಜೆರಾಲ್ಡ್ ಕೋಟ್ಜಿ.