ಬಾಗಲಕೋಟೆ:
ಜಿಲ್ಲೆಯ ತ್ರಿವಳಿ ನದಿಗಳಾದ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಹರಿಯುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರವಾಹ ಬೀತಿ ಉಂಟಾದಲ್ಲಿ ಗ್ರಾಮಸ್ಥರನ್ನು ತಕ್ಷಣವೇ ಸ್ಥಳಾಂತರಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಆಲಮಟ್ಟಿ ಜಲಾಶಯದಿಂದ ೨.೭೫ ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಿಡಲಾಗುತ್ತಿದೆ. ಈ ಪ್ರಮಾಣ ಹೆಚ್ಚಾಗಲಿದ್ದು, ಬಾದಿತ ಗ್ರಾಮಗಳ ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸನ್ನದ್ದರಾಗಬೇಕು ಎಂದು ತಿಳಿಸಿದರು.
ಹಿಪ್ಪರಗಿ ಜಲಾಶಯದಿಂದ ೧.೬೭ ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಈ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇರುವದರಿಂದ ತೊಂದರೆಗೆ ಒಳಗಾಗುವ ಮುತ್ತೂರು, ಸೂರಪಾಲಿ, ತುಬಚಿ ಹಾಗೂ ಕಂಕಣವಾಡಿ ನಡುಗಡ್ಡೆ ಗ್ರಾಮಗಳ ಸ್ಥಳಾಂತರಕ್ಕೆ ಗ್ರಾಮ ಹಾಗೂ ತಾಲೂಕಾ ನಿರ್ವಹಣೆಯ ತಂಡ ಎಲ್ಲ ರೀತಿಯಿಂದ ಸನ್ನದ್ದರಾಗಿ ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಲು ತಿಳಿಸಿದರು. ಪ್ರವಾಹ ನಿರ್ವಹಣೆಗೆ ಸ್ಥಾಪಿಸಲಾದ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೆಕು. ಜಾನುವಾರುಗಳಿಗೂ ಸಹ ಮೂಲಸೌಲಭ್ಯ ಕಲ್ಪಿಸಲು ತಿಳಿಸಿದರು.
ಪ್ರವಾಹ ನಿರ್ವಹಣೆ ಕಾರ್ಯದಲ್ಲಿ ಬೇಜವಾಬ್ದಾರಿ ಸಲ್ಲದು. ಎಲ್ಲ ರೀತಿಯ ಸಿದ್ದತೆ ಇದ್ದರೂ ಕಾರ್ಯದಲ್ಲಿ ಲೋಪವಾಗಿ ಸಮಸ್ಯೆ ಉಂಟಾದಲ್ಲಿ ಸಂಬAಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ತಾಲೂಕಾ ಹಂತದಲ್ಲಿ ಪ್ರವಾಹ ನಿರ್ವಹಣೆಗೆ ಬೇಕಾದ ಅಗತ್ಯ ಬೋಟ್ ಸೇರಿದಂತೆ ಇತರೆ ಸಲಕರಣಗಳು ಸಜ್ಜಾಗಿರಬೇಕು. ನದಿ ತೀರದ ಗ್ರಾಮಗಳಲ್ಲಿ ತಹಶೀಲ್ದಾರ, ನೋಡಲ್ ಅಧಿಕಾರಿಗಳು, ಅಗ್ನಿಶಾಮಕ, ಪೊಲೀಸ್ ಇಲಾಖೆ ಅಧಿಕಾರಿಗಳು ನಿರಂತರವಾಗಿ ನಿಗಾವಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಜಮಖಂಡಿ ಮತ್ತು ಮುಧೋಳ ತಾಲೂಕು ಸೇರಿ ಒಟ್ಟು ೮ ಸೇತುವೆಗಳು ಜಲಾವೃತಗೊಂಡಿದ್ದು, ಸೇತುವೆ ಕಡೆ ಜನರು ಹೋಗದಂತೆ ಸುರಕ್ಷತಾ ದೃಷ್ಠಿಯಿಂದ ಬ್ಯಾರಿಕೇಡ್ ಒಳವಡಿಸಿ ನಿಗಾವಹಿಸಲು ತಿಳಿಸಿದರು. ನವೀಲು ತೀರ್ಥ ಜಲಾಶಯದ ಭರ್ತಿ ಆಗಬೇಕಾದರೆ ಇನ್ನು ೪ ರಿಂದ ೫ ದಿನ ಬೇಕಾಗುತ್ತದೆ. ನಂತರ ನೀರು ಬಿಡಲು ಪ್ರಾರಂಭಿಸಲಾಗುತ್ತಿದೆ. ತಿಂಗಳಾನುಗಟ್ಟಲೆ ಪ್ರವಾಹ ನಿಯಂತ್ರಣ ಸಿದ್ದತೆಗೆ ಸಭೆ ನಡೆಸಲಾಗಿತ್ತು. ಇನ್ನು ಮುಂದು ಪೀಲ್ಡಗೆ ಇಳಿದು ಕೆಲಸ ಮಾಡಬೇಕಿದೆ. ಯಾವುದೇ ರೀತಿಯ ಅನಾಹುತವಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಪ್ರವಾಹ ಸಂದರ್ಭದಲ್ಲಿ ಮುಖ್ಯ ಶಾಲಾ-ಕಾಲೇಜು ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಹಿರಿಯ ಜೀವಿಗಳಿಗೆ ಯಾವುದೇ ರೀತಿಯ ಅನಾಹುತವಾಗದಂತೆ ಎಚ್ಚರಿಕೆ ವಹಿಸಬೇಕು. ಕಾಳಜಿ ಕೇಂದ್ರಗಳಲ್ಲಿನ ಸೌಲಭ್ಯ ಉತ್ತಮವಾಗಿರುವಂತೆ ಮುತುವರ್ಜಿ ವಹಿಸಬೇಕು. ಕೃಷಿ, ತೋಟಗಾರಿಕೆ ಇಲಾಖೆಯು ಹಾನಿಯಾದ ಬಗ್ಗೆ ಕಲೆ ಹಾಕಿ ಮಾಹಿತಿ ಇಟ್ಟುಕೊಂಡಿರಬೇಕು. ಜಾನುವಾರುಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಇರಬೇಕು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ವಿವಿಧ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಪ್ರವಾಹ ಬೀತಿ ಉಂಟಾಗುತ್ತಿರುವ ಹಿನ್ನಲೆಯಲ್ಲಿ ತಂಡವಾಗಿ ನಿರ್ವಹಣೆ ಮಾಡುವ ಕಾರ್ಯವಾಗಬೇಕು. ಸ್ಥಳೀಯ ಜನರು ನದಿಯ ಹತ್ತಿರ ಹಾಗೂ ಮೀನು ಹಿಡಿಯಲು ಹೋಗದಂತೆ ನೋಡಿಕೊಳ್ಳಬೇಕು. ಪ್ರವಾಹದ ಎಚ್ಚರಿಕೆ ಪ್ರದೇಶಗಳಲ್ಲಿರುವ ಶಾಲೆಗಳಿಗೆ ಅಲ್ಲಿಯ ಪರಿಸ್ಥಿತಿಗೆ ಅನುಗುಣವಾಗಿ ಶಾಲೆಗಳಿಗ ರಜೆ ಘೋಷಿಸಬೇಕು. ಅಧಿಕಾರಿಗಳ ಮೊಬೈಲ್ ಆನ್ ಆಗಿರಬೇಕು. ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಡುವಂತಿಲ್ಲವೆಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ, ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಂಟಿ ಕೃಷಿ ನಿರ್ದೇಶಕ ಲಕ್ಷö್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದಶಕ ರವೀಂದ್ರ ಹಕಾಟೆ, ಪಶು ಇಲಾಖೆಯ ಉಪನಿರ್ದೇಶಕ, ಎಸ್.ಎಚ್.ಕಳ್ಳಿಗುಡ್ಡ, ಆರೋಗ್ಯ ಇಲಾಖೆಯ ಡಾ,ಕುಸುಮಾ ಮಾಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.