ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ, ಮನೆ ಬಾಗಿಲಿನತ್ತ ಜಿಲ್ಲಾಡಳಿತ
ನಿಮ್ಮ ಸುದ್ದಿ ಬಾಗಲಕೋಟೆ
ಬಾಗಲಕೋಟೆ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ಮಾರ್ಚ ೨೦ ರಂದು ಗ್ರಾಮ ವಾಸ್ತವ್ಯ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದ್ದಾರೆ.
ತುಳಸಿಗೇರಿ ಗ್ರಾಮದಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಡೀ ದಿನ ವಾಸ್ತವ್ಯ ಹೂಡಲಿದ್ದಾರೆ. ಉಳಿದ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆ. ಜಿಲ್ಲಾಧಿಕಾರಿಗಳ ರೀತಿಯಲ್ಲಿಯೇ ವಿವಿಧ ತಾಲೂಕುಗಳಲ್ಲಿ ಆಯಾ ತಾಲೂಕಿನ ತಹಶೀಲ್ದಾರರು ಗ್ರಾಮವಾಸ್ತವ್ಯ ನಡೆಸಿ ಜನರ ಸಮಸ್ಯೆಗಳಿಗೆ ದನಿಯಾಗಲಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹಾಗೂ ಅಧಿಕಾರಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ.
ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮದಲ್ಲಿನ ಪಹಣಿಯಲ್ಲಿನ ಲೋಪದೋಷ ಸರಿಪಡಿಸುವುದು. ಗ್ರಾಮದ ಎಲ್ಲ ಜನರಿಗೆ ಅರ್ಹ ವ್ಯಕ್ತಿಗಳಿಗೆ ಪಿಂಚಿಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಪಿಂಚಣಿ ಸೌಲಭ್ಯ ಪಡೆಯದೇ ಇರುವವರಿಂದ ದಾಖಲೆ ಸಂಗ್ರಹಿಸಿ ಸ್ಥಳದಲ್ಲಿಯೇ ಆದೇಶ ನೀಡಲು ಕ್ರಮಕೈಗೊಳ್ಳಲಿದ್ದಾರೆ. ಹದ್ದು ಬಸ್ತು, ಪೋಡಿ, ಪೋಡಿ ಮುಕ್ತಗ್ರಾಮ, ಗ್ರಾಮದ ಅಂಗನವಾಡಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ತುಳಸಿಗೇರಿ ಗ್ರಾಮದ ವಿವರ :
ತುಳಸಿಗೇರಿ ಗ್ರಾಮದಲ್ಲಿ ೨೦೧೧ರ ಜನಗಣತಿ ಪ್ರಕಾರ ೨೫೭೮ ಗಂಡು ಮತ್ತು ೨೪೯೫ ಹೆಣ್ಣು ಸೇರಿ ಒಟ್ಟು ೫೦೭೩ ಜನರಿದ್ದಾರೆ. ಗ್ರಾಮವು ಭೌಗೋಳಿಕವಾಗಿ ೩೪೦೪.೦೧ ಎಕರೆ ಕ್ಷೇತ್ರ ಹೊಂದಿದ್ದು, ಅದರಲ್ಲಿ ೩೨೭೮.೦೩ ಎಕರೆ ಸಾಗುವಳಿ ಕ್ಷೇತ್ರವಿದೆ. ೧೫೨.೧೦ ಎಕರೆ ಸರಕಾರಿ, ಅರಣ್ಯ ಜಮೀನು ಇದೆ. ಗ್ರಾಮ ಪಂಚಾಯತಿಯಲ್ಲಿ ೧೨ ಜನ ಸದಸ್ಯರಿದ್ದು, ೫ ಗ್ರಾಮ ಪಂಚಾಯತಿ ಮತಗಟ್ಟೆಗಳಿವೆ. ೫ ಅಂಗನವಾಡಿ ಕೇಂದ್ರ, ೧ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ೨ ಪ್ರಾಥಮಿಕ ಶಾಲೆ, ೧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಮುಜರಾಯಿ ಇಲಾಖೆಗೆ ಒಳಪಟ್ಟ ಮಾರುತೇಶ್ವರ ದೇವಸ್ಥಾನವಿದೆ.
ಗ್ರಾಮ ವಾಸ್ತವ್ಯಕ್ಕೆ ಆಯ್ಕೆಯಾದ ಗ್ರಾಮಗಳ ವಿವರ :
ಮಾರ್ಚ ೨೦ ರಂದು ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಗ್ರಾಮ ವಾಸ್ತವ್ಯ ಮಾಡಿದರೆ, ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ತಹಶೀಲ್ದಾರ ಸುಹಾಸ ಇಂಗಳೆ, ಹುನಗುಂದ ತಾಲೂಕಿನ ಘಟ್ಟಿಗನೂರ ಗ್ರಾಮದಲ್ಲಿ ತಹಶೀಲ್ದಾರ ಗುರುರಾಜ ಕುಲಕರ್ಣಿ, ಇಲಕಲ್ಲ ತಾಲೂಕಿನ ಧಮ್ಮೂರ ಗ್ರಾಮದಲ್ಲಿ ತಹಶೀಲ್ದಾರ ನಿಂಗಪ್ಪ ಬಿರಾದಾರ, ಗುಳೇದಗುಡ್ಡ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ಗುರುರಾಜ ಕುಲಕರ್ಣಿ, ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ಸಂಜಯ ಇಂಗಳೆ, ಮುಧೋಳ ತಾಲೂಕಿನ ಭರಗಿ ಗ್ರಾಮದಲ್ಲಿ ತಹಶೀಲ್ದಾರ ಸಂಗಮೇಶ ಬಾಡಗಿ, ಬೀಳಗಿ ತಾಲೂಕಿನ ಬೂದಿಹಾಳ ಎಸ್.ಎಚ್ ಗ್ರಾಮದಲ್ಲಿ ತಹಶೀಲ್ದಾರ ಭೀಮಪ್ಪ ಅಜ್ಜೂರ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿಯಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.