ಬಾಗಲಕೋಟೆ
ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತೇರದಾಳದಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ತೇರದಾಳ ಪುರಸಭೆ ಆವರಣದಲ್ಲಿ ನಡೆದ ಜನತಾ ದರ್ಶನದಲ್ಲಿ ಸಮಸ್ಯೆಗಳನ್ನು ಹೊತ್ತು ತಂದ ನೂರಾರು ಜನ ಸರತಿ ಸಾಲಿನಲ್ಲಿ ನಿಂತು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ತೋಡಿಕೊಂಡರು. ಎಲ್ಲರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಎನ್.ಸಿ.ಸಿ ವಿದ್ಯಾರ್ಥಿಗಳು ಒಬ್ಬೊಬ್ಬರಂತೆ ಜಿಲ್ಲಾಧಿಕಾರಿಗಳ ಬಳಿ ಕಳುಹಿಸುವ ಕಾರ್ಯ ಮಾಡುತ್ತಿದ್ದರು.
ಜನರು ಹೊತ್ತು ತಂದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳನ್ನು ಕರೆದು ಬಗೆಹರಿಸುವ ಕಾರ್ಯ ನಡೆಯಿತು. ಕೆಲವೊಂದು ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಇತ್ಯರ್ತಕ್ಕೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಪ್ರಾರಂಭದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗಡಿಭಾಗ ನಗರವಾಗಿರುವ ತೇರದಾಳ ಕ್ಷೇತ್ರದ ಜನತೆ ತಾಲೂಕಾ ಕಚೇರಿ, ಜಿಲ್ಲಾಕಚೇರಿಗೆ ತೆರಳಿ, ಹಣ, ಸಮಯ ವ್ಯರ್ಥವಾಗುವದನ್ನು ತಡೆದು ಅವರ ಸಮಸ್ಯೆಗೆ ತತ್ ಕ್ಷಣ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಆಗಮಿಸಿದ್ದಾರೆ ಎಂದರು.
ಇಲ್ಲಿಯ ಜನತೆಗೆ ವಿದ್ಯುತ್, ಕುಡಿಯುವ ನೀರು, ಜಿ.ಎಲ್.ಬಿ.ಸಿ ಯಿಂದ ರೈತರಿಗೆ ನೀರು ಪೂರೈಕೆ ಸೇರಿದಂತೆ ಅನೇಕ ಸಮಸ್ಯೆ ಇವೆ. ಅದರ ಜೊತೆಗೆ ಬರಗಾಲ ಆವರಿಸಿದ್ದರಿಂದ ಬರಗಾಲ ಕಾಮಗಾರಿ ಚುರುಕುಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ ಜಿಲ್ಲೆಯ 2ನೇ ಜನತಾ ದರ್ಶನ ಇದಾಗಿದ್ದು, ಇದಕ್ಕಿಂತ ಮೊದಲು ತೇರದಾಳಕ್ಕೆ ಆಗಮಿಸಿ ಇಲ್ಲಿಯ ಕಾಮಗಾರಿ ವೀಕ್ಷಿಸುತ್ತಿದ್ದಾಗ ಇಲ್ಲಿಯ ಹಿರಿಯರು ಈ ಭಾಗದ ಹಲವು ಸಮಸ್ಯೆಗಳನ್ನು ಹೇಳಿದ್ದರು. ಸಮಸ್ಯೆ ಮತ್ತು ಗಡಿ ಭಾಗದ ನಗರವಾಗಿದ್ದರಿಂದ ಅಯ್ಕೆ ಮಾಡಿಕೊಳ್ಳಲಾಯಿತು. ಈ ಕಾರ್ಯಕ್ರಮದಿಂದ ತಕ್ಷಣ ಸಮಸ್ಯೆಗೆ ಪರಿಹಾರ ದೊರೆಯದಿದ್ದರೂ ಕೆಲವು ದಿನಗಳ ನಂತರವಾದರೂ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಅಧಿಕಾರಿಗಳು ಇರುವುದು ಜನರಿಗೋಸ್ಕರ, ಕಟ್ಟಡೊಳಗೆ ಕುಳಿತು ಕೇವಲ ಕಡತಗಳ ಆಧಾರದ ಮೇಲೆ ಕಾರ್ಯ ಗಮನಿಸುವದನ್ನು ಬಿಟ್ಟು ಜನರ ಜೊತೆಗೆ ಖುದ್ದಾಗಿ ಇದ್ದು, ಸಮಸ್ಯೆ ಅವಲೋಕಿಸುವಂತಾಗುವುದು ಎಂದರು.
ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಜನ ಜೀವನ ಮಿಷನ ಯೋಜನೆಯಡಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹಿಪ್ಪರಗಿ ಬ್ಯಾರೇಜನಿಂದ ನೀರು ತರಲಾಗುತ್ತಿದೆ. ಇದಕ್ಕಾಗಿ 335 ಕೋಟಿ ಅನುದಾನ ಇದ್ದು, ಈ ಕಾಮಗಾರಿ 18 ತಿಂಗಳಲ್ಲಿ ಮುಗಿಯಲಿದೆ. ಇದರಿಂದ ಈ ಭಾಗದ ನೀರಿನ ಸಮಸ್ಯೆ ಬಗೆಹರಿಯಲಿದೆ. ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ, ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ರಬಕವಿ-ಬನಹಟ್ಟಿ ತಾಲೂಕಾ ತಹಶೀಲ್ದಾರ ಗಿರೀಶ ಸ್ವಾದಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬಸ್ ನಲ್ಲಿ ಉಚಿತ ಟಿಕೇಟ್ ಪಡೆದು ಡಿಸಿ ಪ್ರಯಾಣ
————————————-
ತೇರದಾಳದಲ್ಲಿ ನಡೆದ ಜನತಾ ದರ್ಶನಕ್ಕೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತದಿಂದ ಬಸ್ ನಲ್ಲಿ ಪ್ರಯಾಣ ಮಾಡಿದರು. ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಮಹಿಳಾ ಅಧಿಕಾರಿಗಳು ಶಕ್ತಿ ಯೋಜನೆಯ ಶೂನ್ಯ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸಿದರೆ, ಉಳಿದ ಅಧಿಕಾರಿಗಳು ಟೊಕೇಟ್ ಪಡೆದು ಪ್ರಯಾಣ ಮಾಡಿದರು. ಜನತಾ ದರ್ಶನ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.