ತುಮಕೂರು: ಈ ಜಿಲ್ಲೆ ಎರಡನೇ ಬೆಂಗಳೂರು ಆಗಿ ಪರಿವರ್ತನೆ ಆಗುವ ನಂಬಿಕೆ ನಮ್ಮಲ್ಲಿ ಮೂಡುತ್ತಿದ್ದು, ಬೆಂಗಳೂರಿನ ಜನ ನಿಯಂತ್ರಣ ಮಾಡಲು ತುಮಕೂರು ಜಿಲ್ಲೆ ಸೂಕ್ತವಾಗಿದ್ದು, ಬೆಂಗಳೂರಿನ ಮುಂದಿನ 50 ವರ್ಷಗಳ ಅಭಿವೃದ್ಧಿಗಾಗಿ ತುಮಕೂರು ಜಿಲ್ಲೆಯನ್ನು ಈಗಿಂದಲೇ ಅಭಿವೃದ್ಧಿ ಮಾಡಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ಮೆಟ್ರೋವನ್ನು ತುಮಕೂರು ಜಿಲ್ಲೆಗೆ ವಿಸ್ತರಣೆ ಮಾಡುವ ಬೇಡಿಕೆಗಳ ನಡುವೆ ಈ ಹೇಳಿಕೆ ನೀಡಿದ್ದು, ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕಾ ಕ್ಷೇತ್ರ, ಶೈಕ್ಷಣಿಕ ಜಿಲ್ಲೆ ಇರುವುದು ತುಮಕೂರು ಜಿಲ್ಲೆ. ಹೆಚ್ಎಎಲ್ ಈ ಜಿಲ್ಲೆಗೆ ಬಂದಿದ್ದು, ಕೈಗಾರಿಕಾ ಪ್ರದೇಶ ಇರುವ ಕಾರಣ ಈ ಭಾಗಕ್ಕೆ ಹೆಚ್ಚು ಒತ್ತು ಕೊಡಬೇಕಿದೆ ಎಂದರು.ಚುನಾವಣೆ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೆವು ಎಂದರು.
ಈ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಬದಲಾವಣೆ ಆಗಿದೆ. ನಾವು ಬರೀ ಗ್ಯಾರಂಟಿಗಳ ಬಗ್ಗೆ ಅಷ್ಟೇ ಯೋಚಿಸುತ್ತಿಲ್ಲ. ಮುಂದಿನ ಭವಿಷ್ಯಕ್ಕೂ ಯೋಚಿಸಲಾಗುತ್ತಿದೆ. ತುಮಕೂರಿಗೆ ಬಂದಾಗ ಪಾವಗಡ ಸೋಲಾರ್ ನೆನಪಾಗುತ್ತಿದ್ದು, ಅಲ್ಲಿನ ರೈತರು ಸೋಲಾರ್ಗೆ ಜಾಗನೀಡಿ ನಮ್ಮ ಜೀವನ ಬದಲಾವಣೆ ಮಾಡಿದ್ದೀರಿ ಅಂತಿದ್ದಾರೆ. ಇನ್ನೂ ಹತ್ತು ಸಾವಿರ ಎಕರೆ ಜಾಗದಲ್ಲಿ ಸೋಲಾರ್ ವಿಸ್ತರಣೆ ಮಾಡಲಾಗುವುದು ಎಂದು ವಿವರಿಸಿದರು.