ಬೆಂಗಳೂರು: ಕೋವಿಡ್ ಸಮಯದಲ್ಲಿ, ರೈತರು ಹಾಗೂ ಜಿಎಸ್ ಟಿ ವಿಚಾರದಲ್ಲಿ, ಕೇಂದ್ರದ ಯೋಜನೆಗಳ ಅನುದಾನದಲ್ಲಿ, ಬರ ಪರಿಹಾರ, ನರೇಗಾ ಯೋಜನೆ ಹಾಗೂ ನಿರಾವರಿ ಇಲಾಖೆ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದು, ಈ ಅನ್ಯಾಯವನ್ನು ನೋಡಿಕೊಂಡು ಇನ್ನೆಷ್ಟು ದಿನ ಸುಮ್ಮನೆ ಕೂರಬೇಕು? ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಪತ್ರಿಕಾಗೋಷ್ಠಿ ನಡೆಸಿದ ಶಿವಕುಮಾರ್, ರಾಜ್ಯದ ಹಿತ ಕಾಯುವ ಹೋರಾಟಕ್ಕೆ ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಇಡಬೇಕಿದ್ದು, ರಾಜ್ಯದ ಜನ ನಮಗೆ ಅವಕಾಶ ಕೊಟ್ಟಿದ್ದು ಅವರಿಗೆ ನ್ಯಾಯ ಒದಗಿಸಿ ಋಣ ತೀರಿಸುವುದು ನಮ್ಮ ಕರ್ತವ್ಯ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಕೇಂದ್ರ ಸರ್ಕಾರದ ಜತೆ ಸಹಕಾರ ಸಮನ್ವಯತೆಯಿಂದ ನಡೆದುಕೊಂಡು ಬರುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಮಾಡುತ್ತಿರುವ ಅನ್ಯಾಯವನ್ನು ಪ್ರತಿ ವರ್ಷ ಗಮನಿಸುತ್ತಿದ್ದೇವೆ .ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲೂ ಡಬಲ್ ಇಂಜಿನ ಸರ್ಕಾರ ಬಂದರೆ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಿದ್ದು, ಮಧ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಕೂಡ ಇತ್ತು. ಸೂಕ್ತ ಅನುದಾನ ಸಿಕ್ಕಿಲ್ಲ ಎಂದು ಡಿಕೆಶಿ ಆರೋಪಿಸಿದರು.