ಬೀದರ್
ಬೀದರ್ ತಾಲೂಕಿನ ಬಾವಗಿ ಗ್ರಾಮದ ಸಮೀಪದಲ್ಲಿರುವ ಕಾರಂಜಾ ಹಿನ್ನೀರಿನಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವ ಚಿರತೆಯ ಶವ ಪತ್ತೆಯಾಗಿದೆ.
ಭಾನುವಾರ ರಾತ್ರಿ ವಿಷಯ ತಿಳಿದಿದ್ದು, ಮಧ್ಯರಾತ್ರಿ ೦೧ ಗಂಟೆಗೆ ಸ್ಥಳಕ್ಕೆ ತೆರಳಿದ ಇಲಾಖೆಯ ಸಿಬ್ಬಂದಿ ಚಿರತೆಯ ಶವವನ್ನು ಬಗ್ದಲ್ ಅರಣ್ಯಕ್ಕೆ ಸ್ಥಳಾಂತರಿಸಿದರು ಎಂದು ಡಿಎಫ್ಓ ವಾನತಿ ಎಂ.ಎಂ. ಅವರು ವಿಕಕ್ಕೆ ತಿಳಿಸಿದರು.
ಹರೆಯದ ಗಂಡು ಚಿರತೆ ಇದಾಗಿದ್ದು, ಮೃತಪಟ್ಟು ಐದಾರು ದಿನಗಳು ಕಳೆದಿರುವಂತೆ ಕಾಣುತ್ತಿದೆ. ಚಿರತೆಯ ಮೈ ಮೇಲಿನ ಚರ್ಮ ಸಂಪೂರ್ಣ ಕೊಳೆತು ಹೋಗಿದೆ ಎಂದು ವಾನತಿ ಎಂ.ಎಂ. ಹೇಳಿದರು.
ಅರಣ್ಯ ಹಾಗೂ ಪಶು ಇಲಾಖೆಯ ಸಿಬ್ಬಂದಿ ಸೇರಿ
ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಚಿರತೆಯ ಚರ್ಮ ಕೊಳೆತ ಕಾರಣ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಹೀಗಾಗಿ, ಮೃತ ಚಿರತೆಯ ಸ್ಯಾಂಪಲ್ ಅನ್ನು ಬೆಂಗಳೂರಿನ ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿ ನಂತರವೇ ಚಿರತೆಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಡಿಎಫ್ಓ ಹೇಳಿದರು.
ಮೃತ ಚಿರತೆಯು ಎಲ್ಲಿಂದ ಬಂದಿದೆ ಎಂಬ ಖಚಿತ ಮಾಹಿತಿ ಲಭಿಸಿಲ್ಲ. ಆದರೆ, ಈಚೆಗೆ ಹೊನ್ನಿಕೇರಿ ಅರಣ್ಯಗಲ್ಲಿ ಕಂಡು ಬಂದ ಚಿರತೆ ಇದೇ ಆಗಿದೆಯೋ ಎನ್ನುವ ಕುರಿತು, ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಹೊನ್ನಿಕೇರಿಯಿಂದ ಬಾವಗಿಗೆ 20 ಕಿಮೀ ಅಂತರವಿದೆ. ಚಿರತೆ ಅಲ್ಲಿಗೆ ಹೋಗಿರುವ ಸಾಧ್ಯತೆ ಇದೆ. ಆದರೂ, ಮೃತ ಚಿರತೆ ಯಾವುದು ಎನ್ನುವುದರ ಕುರಿತು ಹೊನ್ನಕೇರಿ ಅರಣ್ಯದಲ್ಲಿ ಪರಿಶೀಲಿಸಲಾಗುತ್ತದೆ ಎಂದು ವಾನತಿ ಎಂ.ಎಂ. ಹೇಳಿದರು.
ಕಳೆದ ತಿಂಗಳಷ್ಟೇ ಬೀದರ್ ತಾಲೂಕಿನ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಚಿರತೆ ಯೊಂದು ಅರಣ್ಯ ಇಲಾಖೆಯ ಸಿಸಿ ಟಿವಿನಲ್ಲಿ ಸೆರೆಯಾಗಿತ್ತು. ಈ ಭಾಗದಲ್ಲಿನ ಸಾಕು ನಾಯಿ ಗಳನ್ನು ತಿಂದು ಹಾಕಿದ್ದಲ್ಲದೆ, ಆತಂಕವನ್ನು ಸೃಷ್ಟಿಸಿದೆ. ಇದೀಗ ಮೃತಪಟ್ಟಿರುವ ಚಿರತೆ ಇದೆ ಇದೆಯೋ ಅಥವಾ ಬೇರೆ ಚಿರತೆಯದ್ದಾಗಿದೆಯೋ ಎನ್ನುವ ಚರ್ಚೆ ಶುರುವಾಗಿದೆ.
ಅಲ್ಲದೆ, ಬೇರೆಡೆ ಮೃತಪಟ್ಟಿರುವ ಚಿರತೆಯು ಕಾರಂಜಾ ಹಿನ್ನೀರಿನಲ್ಲಿ ಹರಿದುಕೊಂಡು ಬಂದಿರುವ ಸಾಧ್ಯತೆಯೂ ಇದೆ ಎಂದು ಶಂಕಿಸಲಾಗಿದೆ.