ಬಾಗಲಕೋಟೆ
ಎಲ್ಲಾ ರಾಜಕೀಯ ಪಕ್ಷಗಳು ಗಾಣಿಗ ಸಮಾಜವನ್ನು ತುಳಿಯಲು ಹುನ್ನಾರ ನಡೆಸಿವೆ ಎಂದು ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಲಾಗಲೋಟಿ ಹೇಳಿದರು.
ನವನಗರದ ಜ್ಯೋತಿ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದ ಗಾಣಿಗ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿಗೆ ಕಾಂತರಾಜ್ ಜಾತಿ ಗಣತಿ ವರದಿಯನ್ನು ಜಯಪ್ರಕಾಶ ಹೆಗಡೆ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಗಾಣಿಗ ಸಮಾಜವನ್ನು ಕಡೆಗಣಿಸಲಾಗಿದೆ. ಅಲ್ಲದೆ ಗಾಣಿಗ ಸಮಾಜವನ್ನು ಲಿಂಗಾಯತ ಸಮುದಾಯದಲ್ಲಿ ಸೇರಿಸಲಾಗಿದೆ ಎಂದರು.
ರಾಜ್ಯದಲ್ಲಿ ಗಾಣಿಗ ಸಮುದಾಯದ ಸಂಖ್ಯೆ ಸೊನ್ನೆ ಆಗಿದೆ. ಇದನ್ನು ನೋಡಿದರೆ ಮೇಲ್ನೋಟಕ್ಕೆ ೨ಎ ಮೀಸಲಾತಿಯಿಂದ ತಗೆಯುವ ಹುನ್ನಾರ ನಡೆದಿರುವುದು ಸ್ಪಷ್ಟವಾಗುತ್ತಿದೆ. ಅದಕ್ಕಾಗಿ ಗಾಣಿಗ ಸಮಾಜದವರು ಎಚ್ಚೆತ್ತುಕೊಂಡು ಹೋರಾಟ ಮಾಡಬೇಕು. ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆಯನ್ನು ತಿಳಿಸಲಾಗುವದು ಎಂದು ಹೇಳಿದರು.
ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ದುಂಡಪ್ಪ ಏಳೆಮ್ಮಿ, ಅವೈಜ್ಞಾನಿಕ ಜಾತಿ ಗಣತಿ ವರದಿ ಬಗ್ಗೆ ಸಮಾಜದವರು ಧ್ವನಿ ಎತ್ತದಿದ್ದರೆ ಮುಂದಿನ ದಿನದಲ್ಲಿ ಸಮಾಜಕ್ಕೆ ಮೀಸಲಾತಿ ಕೈತಪ್ಪುವ ಕಾಲ ದೂರವಿಲ್ಲ. ಬಾಗಲಕೋಟೆಯಲ್ಲಿ ಗಾಣಿಗ ಸಮಾಜಕ್ಕೆ ಇಲ್ಲಿವರಿಗೂ ಒಂದು ಸ್ವಂತ ಜಾಗವಿಲ್ಲ. ಆದ್ದರಿಂದ ಸಮಾಜದಿಂದ ದೇಣಿಗೆ ಸಂಗ್ರಹ ಮೂಲಕ ನಗರದ ಸುತ್ತಮುತ್ತ ೨ ಎಕರೆ ಜಾಗ ಖರೀದಿಗೆ ನಿರ್ಧರಿಸಲಾಗಿದೆ ಎಂದರು.
ಯುವ ಮುಖಂಡ ಸಂತೋಷ ಹೊಕ್ರಾಣಿ, ಈಗ ಸಲ್ಲಿಕೆಯಾದ ಜಾತಿ ಗಣತಿ ವರದಿಯಲ್ಲಿ ಸಮಾಜದ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಹೋರಾಟ ಮಾಡದಿದ್ದರೆ ಮುಂದೆ ನಮ್ಮ ಮಕ್ಕಳ ಭವಿಷ್ಯಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದ ಮುಖಂಡ ಚಂದ್ರಕಾAತ ಕೇಸನೂರ ಮಾತನಾಡಿದರು. ಸಮಾಜದ ಮುಖಂಡರು ಭಾಗವಹಿಸಿದ್ದರು.
ಪದಾದಿಕಾರಿಗಳ ಆಯ್ಕೆ
ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ದುಂಡಪ್ಪ ಏಳೆಮ್ಮಿ ಅವರಿಂದ ಖಾಲಿಯಾದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಚೊಳಚಗುಡ್ಡ, ಬಾಗಲಕೋಟೆ ಗ್ರಾಮೀಣ ಅಧ್ಯಕ್ಷರನ್ನಾಗಿ ಪ್ರಶಾಂತ ಮಾಚಕನೂರ ಹಾಗೂ ಗ್ರಾಮೀಣ ಪ್ರಧಾನ ಕಾರ್ಯದರ್ಶಿಯಾಗಿ ಈರಣ್ಣ ಗಲಾಟೆ ಅವರನ್ನು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.