ಬೆಂಗಳೂರು : ಗುರುವಾರ ( ಮಾ 14) ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪೋಲೀಸ್ ನೇಮಕಾತಿ ಹಗರಣದಲ್ಲಿ ಹೆಚ್ಚಿನ ತನಿಖೆಗೆ ಎಸ್.ಐ.ಟಿ ರಚನೆ, ಅರಮನೆ ರಸ್ತೆ ಅಗಲೀಕರಣಕ್ಕೆ ಟಿಡಿಆರ್ ಕೊಡುವ ಮುಂತಾದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಲಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ್ತು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿಯು ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಘೋಷಿಸಿದ ಒಂದು ದಿನದ ತರುವಾಯ, ಸಿದ್ದರಾಮಯ್ಯ ಸರ್ಕಾರ ಮಹತ್ವದ ಸಚಿವ ಸಂಪುಟ ನಿರ್ಧಾರವನ್ನು ತೆಗೆದುಕೊಂಡಿದ್ದು, ಮೇಖ್ರಿ ವೃತ್ತದ ಆಸುಪಾಸಿನಲ್ಲಿ 15.5 ಎಕರೆ ಸ್ವಾಧೀನ ಪಡಿಸಿಕೊಳ್ಳಲು 2006ರಲ್ಲೇ ನಿರ್ಧರಿಸಲಾಗಿತ್ತು ಎಂದು ಕಂದಾಯ ಸಚಿವ ಕೃಷ್ಣಭೈರೇ ಗೌಡ ಹೇಳಿದ್ದಾರೆ.ಬೆಂಗಳೂರಿನ ಹೃದಯ ಭಾಗದಲ್ಲಿರುವ ಅರಮನೆ ಮೈದಾನದಲ್ಲಿ ಮೈಸೂರಿನ ಹಿಂದಿನ ಮಹಾರಾಜರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ನಾಲ್ಕು ಪಾಲಿದೆ.
ಇವರ ಓರ್ವ ಸಹೋದರಿಯ ಪುತ್ರ ಯದುವೀರ್. ಸದ್ಯದ ಮೈಸೂರು ಮಹಾರಾಜರಿಗೆ ನೇರವಾಗಿ ಆಸ್ತಿಯ ಹಕ್ಕು ಇನ್ನೂ ವರ್ಗವಾಗಿಲ್ಲ. ಶ್ರೀಕಂಠದತ್ತ ಅವರ ಸಹೋದರಿಯರಿಗೆ ತಲಾ 28 ಎಕರೆ ಪಾಲಿದ್ದು, ಸಹೋದರ ಶ್ರೀಕಂಠದತ್ತ ಒಡೆಯರ್ ವಿರುದ್ದ ಸಹೋದರಿಯರೇ ಕೋರ್ಟ್ ಮೊರೆ ಹೋಗಿದ್ದಾರೆ, ಆ ವ್ಯಾಜ್ಯ ಇನ್ನೂ ವಿಚಾರಣೆಯ ಹಂತದಲ್ಲಿದೆ. ಇದು ಒಂದು ಕಡೆಯಾದರೆ, ಇಡೀ ಅರಮನೆ ಮೈದಾನವನ್ನು ವಿಶೇಷ ಕಾನೂನು ರೂಪಿಸಿ ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು, ಇದಕ್ಕೆ ಹೈಕೋರ್ಟ್ ಅನುಮತಿ ಕೂಡಾ ದಕ್ಕಿದೆ. ಆದರೆ, ಇದನ್ನು ಒಡೆಯರ್ ಕುಟುಂಬ, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರಿಂದ, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಸೂಚಿಸಿದೆ.
ಇದು ವ್ಯಾಜ್ಯದ ಹಿನ್ನಲೆ..ಸಂಪುಟ ಸಭೆಯಲ್ಲಿ ಅರಮನೆ ರಸ್ತೆ ಅಗಲೀಕರಣ ಮಾಡಲು ಟಿಡಿಆರ್ ಕೊಡಲು ತೀರ್ಮಾನಿಸಲಾಗಿದ್ದು, ಅರಮನೆಯ ಒಳಗೆ ಕಾಂಪೌಂಡ್ ಹಾಕಲಾಗಿದ್ದು, ಅರಮನೆ ಹೊರಗಿನ ಜಾಗವನ್ನು ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ನಡೆಯುತ್ತಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಮಾಹಿತಿ ಕಂಡು ಬಂದಿದೆ.