ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲುಕಿನ ಅಮೀನಗಡ ಪಟ್ಟಣದ ಕೆಲವೆಡೆ ಬೀದಿದೀಪಗಳ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಪಪಂ ಆಡಳಿತ ಇಂತಹ ವಿದ್ಯುತ್ ಕಂಬಗಳಿಗೆ ಬಲ್ಪ್ ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ವಾರ್ಡ್ ನಂ.2 ಅಮೃತನಗರ ಸೇರಿದಂತೆ ಹಲವೆಡೆ ಬೀದಿದೀಪದ ವ್ಯವಸ್ಥೆ ಮಂಕಾದಂತೆ ಕಾಣುತ್ತಿದೆ. ಇಂತಹ ಪ್ರದೇಶದಲ್ಲಿ ರಾತ್ರಿ ಸಂಚರಿಸುವುದೇ ಕಷ್ಟವಾಗಿದೆ. ಅದರಲ್ಲೂ ಗುಡ್ಡದ ಸಮೀಪದ ಪ್ರದೇಶದಲ್ಲಂತೂ ಅಲ್ಲಿನ ನಿವಾಸಿಗಳ ಪರಿಸ್ಥಿತಿ ಹೇಳತೀರದು.
ಅಮೃತ ನಗರದಲ್ಲಿ ನ.15 ರಂದು ಬೀದಿದೀಪದ ವ್ಯವಸ್ಥೆ ಬಂದ್ ಆಗಿದ್ದು ಈ ಕುರಿತು ಪಪಂನ ಸಂಬಂಧಿಸಿದ ಸಿಬ್ಬಂದಿಗೆ ತಿಳಿಸಿದರೂ ಓಕೆ ಎಂದಿದ್ದಾರೆ ಹೊರತು ಈವರೆಗೆ ಬೀದಿದೀಪ ಅಳವಡಿಸುವ ಗೊಡವೆಗೆ ಹೋಗಿಲ್ಲ.
ವಿಪರ್ಯಾಸವೆಂದರೆ ಕೆಲ ಬೀದಿದೀಪಗಳು ಹಗಲು ವೇಳೆಯಲ್ಲೂ ಬೆಳಕು ನೀಡುತ್ತವೆ. ನಿರಂತರವಾಗಿ ಆನ್ ಆಗಿದ್ದು ಅಂತಹವುಗಳಿಗೆ ಬಟನ್ ವ್ಯವಸ್ಥೆ ಮಾಡಿ ಎಂದರೂ ಇತ್ತ ಲಕ್ಷ ವಹಿಸುತ್ತಿಲ್ಲ ಎಂಬ ದೂರು ಬಂದಿದೆ.
ಎಲ್ಲ ಅವ್ಯವಸ್ಥೆಯನ್ನು ಪಟ್ಟಣ ಪಂಚಾಯಿತಿ ಕಚೇರಿಗೆ ಬಂದೇ ಹೇಳಬೇಕು ಎಂಬ ಧೋರಣೆ ಪಪಂ ಸಿಬ್ಬಂದಿ ಕೈ ಬಿಡಬೇಕು. ಆಗಾಗ ವಾರ್ಡ್ಗಳಲ್ಲಿ ಸಂಚರಿಸಿ ಅಲ್ಲಿನ ಸಮಸ್ಯೆ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.