ಬಾಗಲಕೋಟೆ
ನಗರದ ವಾಸವಿ ಚಿತ್ರಮಂದಿರದಲ್ಲಿ ಬಹು ದಿನಗಳ ನಂತರ ೫೦ ದಿನ ಪ್ರದರ್ಶನ ಕಂಡಿರುವ ದೇಸಾಯಿ ಚಲನಚಿತ್ರ ಉತ್ತರ ಕರ್ನಾಟಕದ ಕೌಟುಂಬಿಕ ಚಲನಚಿತ್ರವಾಗಿದೆ ಎಂದು ಚಿತ್ರ ನಿರ್ಮಾಪಕ ಮಹಾಂತೇಶ ಚೊಳಚಗುಡ್ಡ ಹೇಳಿದರು.
ಚಲನಚಿತ್ರ ೫೦ ದಿನ ಪೂರೈಸಿದ ಹಿನ್ನೆಲೆಯಲ್ಲಿ ವಾಸವಿ ಚಿತ್ರಮಂದಿರದಲ್ಲಿ ಹಮ್ಮಿಕೊಂಡ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು. ಬಾಗಲಕೋಟೆ ಜನ ಚಿತ್ರೀಕರಣ ಹಾಗೂ ಚಿತ್ರ ಬಿಡುಗಡೆ ನಂತರವೂ ಪ್ರೋತ್ಸಾಹ ನೀಡಿದ್ದಾರೆ ಎಂದರು.
ಇತ್ತೀಚಿನ ದಿನದಲ್ಲಿ ಕನ್ನಡ ಚಲನಚಿತ್ರ ರಂಗ ಸಂಪೂರ್ಣ ನೆಲಕಚ್ಚುತ್ತಿರುವುದರಲ್ಲಿ ಚಿತ್ರರಂಗದ ಪ್ರಮುಖರು ಹಾಗೂ ನಾಯಕ ನಟರೇ ಕಾರಣರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕನ್ನಡ ಪರ ಸಂಘಟನೆಗಳು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಟೀಕಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಿತ್ರದ ನಾಯಕ ನಟ ಪ್ರವೀಣಕುಮಾರ, ನಿರ್ದೇಶಕ ನಾಗಿರೆಡ್ಡಿ ಸೇರಿದಂತೆ ನಟರು, ಅಭಿಮಾನಿಗಳು ಇದ್ದರು.