ಹನೂರು : ಪ್ರಸಿದ್ಧ ಮಲೆ ಮಹಾದೇಶ್ವರ ಬೆಟ್ಟದ ಮಹಾದೇಶ್ವರ ದೇವಾಲಯದ ಹೊರಾಂಗಣದಲ್ಲಿನ ರಥ ಹಾಗೂ ಉತ್ಸವ ತೆರಳು ಮಾರ್ಗವನ್ನು ದುರಸ್ತಿಪಡಿಸುವ ಕಾಮಗಾರಿ ಭರದಿಂದ ಸಾಗಿದೆ.
ರಥ ಸಾಗುವಾಗ ಗಾಲಿಗಳು ಸರಾಗವಾಗಿ ತೆರಳಲು ಈ ಹಾದಿಯಲ್ಲಿ ಸಮಸ್ಯೆ ಇದ್ದು, ಏರುಪೇರಾಗುತ್ತಿತ್ತು. ಇದನ್ನು ಮನಗಂಡ ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಎಲ್ಲೆಲ್ಲಿ ಮಾರ್ಗ ಹದಗೆಟ್ಟಿದೆಯೋ, ಉಬ್ಬು, ತಗ್ಗುಗಳು ಇವೆಯೋ ಅದನ್ನು ಸರಿಪಡಿಸುವ ಕಾರ್ಯವನ್ನು ಕೈಗೊಂಡಿದೆ.
ಈ ಸಂದರ್ಭಗಳಲ್ಲಿ ದೇವಾಲಯದ ಸುತ್ತ ರಥ ಹಾಗೂ ಉತ್ಸವಗಳು ಪ್ರದಕ್ಷಿಣೆ ಹಾಕುವಾಗ ರಸ್ತೆ ಕೆಲವೆಡೆ ಇರುವ ಏರಿಳಿತಗಳಿಂದ ರಥದ ಸುಗಮ ಸಂಚಾರಕ್ಕೆ ತೊಂದರೆಯಾಗಿ ಸಣ್ಣಪುಟ್ಟ ಅವಘಡಗಳು ಸಂಭವಿಸುವ ಸಾಧ್ಯತೆಗಳಿದ್ದು, ಆ ಮಾರ್ಗ ದುರಸ್ತಿಪಡಿಸಲಾಗುತ್ತಿದೆ.
ಶ್ರೀ ಕ್ಷೇತ್ರದಲ್ಲಿ ನಿತ್ಯ ನಡೆಯುವ ಚಿನ್ನ, ಬೆಳ್ಳಿ ರಥೋತ್ಸವದ ವೇಳೆ ಹೆಚ್ಚಿನ ಭಕ್ತರು ಭಾಗಿಯಾಗುತ್ತಾರೆ. ಹಲವು ಸಂದರ್ಭಗಳಲ್ಲಿ ನೂಕು ನುಗ್ಗಲು ಉಂಟಾಗುತ್ತದೆ. ರಥವು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವಾಗ ಕೆಲ ಕಡೆ ಇರುವ ಏರಿಳಿತಗಳು ಹಾಗೂ ಗುಂಡಿಗಳಿಂದ ಸಮಸ್ಯೆಯಾಗುತ್ತಿದೆ.
ಜತೆಗೆ ಹರಕೆ ಹೊತ್ತ ಭಕ್ತರು ಉರುಳು ಸೇವೆ ಮಾಡುವಾಗ ಅಡಚಣೆಯಾಗುತ್ತಿದೆ. ಆದ್ದರಿಂದ ದೇವಸ್ಥಾನದ ಹೊರ ಆವರಣದಲ್ಲಿರುವ ಅವ್ಯವಸ್ಥೆಗಳನ್ನು ಸರಿದೂಗಿಸಿ ಎಂದು ಭಕ್ತರು ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಹಬ್ಬ ಹರಿದಿನ, ವಿಶೇಷ ದಿನಗಳು,ಅಮಾವಾಸ್ಯೆ,ಯುಗಾದಿ, ಶಿವರಾತ್ರಿ, ಮಹಾಲಯ ಅಮಾವಾಸ್ಯೆ ಸೇರಿದಂತೆ ದೀಪಾವಳಿ ಜಾತ್ರೆಯ ಸಂದರ್ಭದಲ್ಲಿ ರಾಜ್ಯದ ನಾನಾ ಜಿಲ್ಲೆ ಹಾಗೂ ನೆರೆಯ ತಮಿಳುನಾಡು ರಾಜ್ಯದಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ಹುಲಿವಾಹನ ಉತ್ಸವ, ಬಸವ ವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ , ಬೆಳ್ಳಿ ತೇರಿನ ಉತ್ಸವ, ಚಿನ್ನದ ರಥೋತ್ಸವವ ಹಾಗೂ ಜಾತ್ರೆಯ ಸಂದರ್ಭಗಳಲ್ಲಿ ನಾನಾ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ.