ಕೂಡಲಸಂಗಮ: ಶ್ರಾವಣದ ಮೊದಲ ಸೋಮವಾರ, ಭಾನುವಾರ ಶ್ರಾವಣ ಅಮಾವಾಸ್ಯೆ ನಿಮಿತ್ತ ಕೂಡಲಸಂಗಮ ಭಕ್ತರಿಂದ ತುಂಬಿಕೊಂಡಿತ್ತು.
ಭಾನುವಾರ ಶ್ರಾವಣ ಅಮಾವಾಸ್ಯೆ ನಿಮಿತ್ತ ಅಪಾರ ಭಕ್ತರು ಸುಕ್ಷೇತ್ರಕ್ಕೆ ಬಂದು ದರ್ಶನ ಪಡೆದರು. ಕೆಲವು ಭಕ್ತರು ದೇವಾಲಯ ಆವರಣದಲ್ಲಿ ವಾಸ್ತವ್ಯ ಮಾಡಿ ಬೆಳಗ್ಗೆ ಎದ್ದು ಕೃಷ್ಣಾ, ಮಲಪ್ರಭಾ ನದಿ ಸಂಗಮದಲ್ಲಿ ಪುಣ್ಯ ಸ್ನಾನಮಾಡಿ, ಶ್ರಾವಣದ ಮೊದಲ ಸೋಮವಾರ ಆಚರಿಸಿ ಸಂಭ್ರಮಿಸಿದರು.
ಸೋಮವಾರ ಬೆಳಗ್ಗೆ 5ಕ್ಕೆ ವಿವಿಧ ಗ್ರಾಮಗಳಿಂದ ಭಕ್ತರು ಪಾದಯಾತ್ರೆ ಮೂಲಕ ಸುಕ್ಷೇತ್ರಕ್ಕೆ ಆಗಮಿಸಿ ಪುಣ್ಯಸ್ನಾನ ಮಾಡಿ ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆದು ಶ್ರಾವಣದ ಮೊದಲ ಸೋಮವಾರ ಆಚರಿಸಿದರು.
ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭಾನುವಾರ ಸಂಗಮನಾಥನಿಗೆ 157 ರುದ್ರಾಭಿಷೇಕ, 73 ಪಂಚಾಮೃತ ಅಭಿಷೇಕ ಮಾಡಿಸಿದರು. ಸೋಮವಾರ 110 ರುದ್ರಾಭಿಷೇಕ, 66 ಪಂಚಾಮೃತ ಅಭಿಷೇಕ ಮಾಡಿಸಿದರು. ಎರಡು ದಿನದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಸುಕ್ಷೇತ್ರಕ್ಕೆ ಆಗಮಿಸಿದ್ದರು.