This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsState News

ಜಾಗತಿಕ ತಾಪಮಾನ ಕುರಿತ ಸಂವಾದ

ಜಾಗತಿಕ ತಾಪಮಾನ ಕುರಿತ ಸಂವಾದ

ವಿಜಯಪುರ

ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತರಾಗಿ ಭವಿಷ್ಯದಲ್ಲಿ ಹಸಿರು ಸೈನಿಕರಾಗಬೇಕು ಎಂದು ಪ್ರಪಂಚದ ಅತ್ಯಂತ ಕಿರಿಯ ವಯಸ್ಸಿನ ಚಿತ್ರ ನಿರ್ದೇಶಕನೆಂದು ಗಿನ್ನೆಸ್ ದಾಖಲೆ ಮಾಡಿರುವ ಕೇರ್ ಆಫ್ ಫುಟಪಾತ್ ಸಿನೇಮಾ ನಿರ್ದೇಶಕ ಮತ್ತು ನಟ ಮಾಸ್ಟರ್ ಕಿಶನ್ ಹೇಳಿದ್ದಾರೆ.

ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಎಸ್.ಪಿ.ಪಿ.ಎ ಸಂಸ್ಥಾಪಕ ಧ್ರುವ ಎಂ. ಪಾಟೀಲ ಜೊತೆ ನಡೆದ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಕುರಿತು ವಿನೂತನ ಮತ್ತು ವಿಶಿಷ್ಠ ಸಂವಾದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಜಂಟಿಯಾಗಿ ಚಾಲನೆ ನೀಡಿದರು.

ಎಸ್.ಪಿ.ಪಿ.ಎ(ಸೊಸಾಯಿಟಿ ಆಫಅ ಪ್ರೊಟೆಕ್ಷನ್ ಆಫ್ ಪ್ಲ್ಯಾಂಟ್ಸ್ ಆ್ಯಂಡ್ ಎನಿಮಲ್ಸ್), ಶಾಲಾ ಶಿಕ್ಷಣ ಇಲಾಖೆ ಮತ್ತು ಅರ್ಜುಣಗಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಸ್ಚರ್ ಕಿಶನ್, ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪರಿಸರ, ಕಾಡು, ಪ್ರಾಣಿಗಳ ಸಂರಕ್ಷಣೆಯಲ್ಲಿ ಎಸ್.ಪಿ.ಪಿ.ಎ ಸಂಘಟನೆ ಇತರರಿಗೆ ಮಾದರಿಯಾಗಿದೆ. ಈ ಸಂಸ್ಥೆಯ ಧ್ಯೇಯೋದ್ದೇಶಗಳು ಸುಂದರ ಪರಿಸರ ನಿರ್ಮಿಸಿ ಪ್ರಾಣಿ, ಪಕ್ಷಿ ಸಂಕುಲಗಳನ್ನು ಸಂರಕ್ಷಿಸಿ ಮನುಕುಲದ ಒಳತಿಗಾಗಿ ಪೂರಕವಾಗಿವೆ. ಹೀಗಾಗಿ ಈ ಸಂಘಟನೆಯ ರಾಯಭಾರಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮರಗಳನ್ನು ಸಂರಕ್ಷಿಸುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯ. ಜಲ, ವಾಯು, ಭೂ ಮಾಲಿನ್ಯ ಇಂದು ಗಂಭೀರ ಸಮಸ್ಯೆ ತಂದೊಡ್ಡುತ್ತಿವೆ. ಪರಿಸರ ನಾಶದಿಂದ ಜನಜೀವನಕ್ಕೂ ತೊಂದರೆಯಾಗುತ್ತಿದೆ. ನಮ್ಮ ಪರಿಸರವನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ ಅವರು, ಗೆಲುವು ನಿನ್ನ ಕೈಯ್ಯಲ್ಲಿದೆ ಎಂದು ಹಾಡು ಹೇಳಿದರು. ಅಲ್ಲದೇ, ಪ್ರತಿಯೊಬ್ಬರು ಕನಿಷ್ಠ ತಲಾ ಒಂದು ಮರ ನೆಡುವಂತೆ ಕರೆ ನೀಡಿದರು.

ಎಸ್.ಪಿ.ಪಿ.ಎ ಸಂಸ್ಥಾಪಕ ಧ್ರುವ ಎಂ. ಪಾಟೀಲ ಮಾತನಾಡಿ, ಜಗತ್ತಿನ ಭವಿಷ್ಯ ವಿದ್ಯಾರ್ಥಿಗಳ ಕೈಯ್ಯಲ್ಲಿದೆ. ಈ ಮುಂಚೆ ಬರಪೀಡಿತ ಜಿಲ್ಲೆ ಎಂದು ಹಣೆಪಟ್ಟಿ ಹೊಂದಿದ್ದ ವಿಜಯಪುರ ಜಿಲ್ಲೆಯಲ್ಲಿ ಈಗ ಕೋಟಿ ವೃಕ್ಷ ಅಭಿಯಾನದಿಂದಾಗಿ ಹಸಿರಿನ ಪ್ರಮಾಣ ಹೆಚ್ಚಾಗುತ್ತಿದೆ. ನಾವು ಪರಿಸರವನ್ನು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ. ನಗರೀಕರಣದಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಈಗ ಹಳ್ಳಿಯಲ್ಲಿದ್ದುಕೊಂಡೆ ನಗರದಲ್ಲಿ ಗಳಿಸುವಷ್ಟು ಹಣ ಗಳಿಸಬಹುದು. ಪ್ಯಾಟಿಗಿಂತ ಹಳ್ಳಿ ಜೀವನವೇ ಶ್ರೇಷ್ಠವಾಗಿದೆ. ನಾವು ಪರಿಸರವನ್ನು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ. ಪ್ರತಿಯೊಬ್ಬರು ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ ಒದಗಿಸಲು ಮುಂದಾಗಬೇಕು. ರೈತರಿಗೆ ಎಲ್ಲರಿಗಿಂತಲೂ ಹೆಚ್ಚು ಶ್ರೇಷ್ಠ ಕಾಯಕಯೋಗಿಯಾಗಿದ್ದಾನೆ ಎಂದು ಹೇಳಿದರು.

ಎಸ್.ಪಿ.ಪಿ.ಎ ಸಂಘಟನೆ ಸ್ಥಾಪಿಸಲು ಕಾರಣ, ಅದರ ಧ್ಯೇಯೋದ್ದೇಶಗಳನ್ನು ವಿವರಿಸಿದ ಅವರು, ಕೊರೊನಾ ಸಂದರ್ಭದಲ್ಲಿ ಸಸಿ ಬೆಳೆಸಿದ್ದೇವೆ, ಬೀದಿ ನಾಯಿಗಳಿಗೆ ಆಹಾರ ನೀಡಿದ್ದೇವೆ. ವಿಶ್ವದ 12 ನಗರಗಳ 6000 ನಾಯಿಗಳಿಗೆ ಆಹಾರ ಹಾಕಿದ್ದೇವೆ. ಕೋಟಿ ವೃಕ್ಷ ಅಭಿಯಾನ ಮಾಡಿದ್ದೇವೆ. ಪರಿಸರ ಮತ್ತು ಪ್ರಾಣಿಗಳ ಜೊತೆ ಬದುಕಿದರೆ ಜೀವನ ಸುಂದರವಾಗಿರುತ್ತದೆ. ಈ ಮುಂಚೆ ಕಬಿನಿ ಅರಣ್ಯದಲ್ಲಿ 10 ವರ್ಷ ಕಾಯ್ದು ಕಪ್ಪು ಚಿರತೆ ಕುರಿತು ಸಾಕ್ಷ್ಯಚಿತ್ರ ತಯಾರಿಸಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ 200 ಕೃಷ್ಣ ಮೃಗಗಳಿವೆ. ಗುಜರಾತ ಮತ್ತು ಚೈನಾದಿಂದ ರಾಜಹಂಸ ಪಕ್ಷಿಗಳು ವಿಜಯಪುರ ಜಿಲ್ಲೆಗೆ ಪ್ರತಿವರ್ಷ ವಲಸೆ ಬರುತ್ತವೆ. ಆಲಮಟ್ಟಿ ಹಿನ್ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ. ವಿಜಯಪುರ ಜಿಲ್ಲೆಯಲ್ಲಿರುವ ಪ್ರಾಣಿ, ಪಕ್ಷಿ ಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡಲಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಮಾಸ್ಟರ್ ಕಿಶನ್ ಮತ್ತು ಧ್ರುವ ಎಂ. ಪಾಟೀಲ, ಜಾಗತಿಕ ತಾಪಮಾನ, ನಗರೀಕರಣ, ಪರಿಸರ ಮಾಲಿನ್ಯಕ್ಕೆ ಕಾರಣಗಳನ್ನು ವಿವರಿಸಿದರು. ಅಲ್ಲದೇ, ಗಿಡ ಕಡಿಯುವುದು ಅನಿವಾರ್ಯವಾದರೆ, ಒಂದು ಗಿಡ ಕಡಿದರೆ ಎರಡು ಗಿಡ ನೆಡಬೇಕು ಎಂದು ಹೇಳಿದರು. ಓಝೋನ್ ಪದರದಲ್ಲಿ ರಂಧ್ರ ಉಂಟಾಗಿದ್ದು, ಗಿಡ, ಮರಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಇದರಿಂದಾಗುವ ಹೆಚ್ಚಿನ ಹಾನಿ ತಪ್ಪಿಸಬಹುದು. ಇಲ್ಲದಿದ್ದರೆ ಪ್ರಾಣಿ, ಪಕ್ಷಿಗಳು ಬದುಕುವುದು ಕಷ್ಟ. ಭಾರತದಲ್ಲಿ ಸುಮಾರು 3000 ಚಿರತೆಗಳಿವೆ. ದೇಶದಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾಡು ಬೆಳೆಸಿದಾಗ ಮಾತ್ರ ಇವುಗಳ ಸಂರಕ್ಷಣೆ ಸಾಧ್ಯ. ಕಾಡಿನಿಂದ ಗಿಡ ಕಡಿಯಬೇಡಿ ಎಂದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಎಸ್.ಪಿ.ಪಿ.ಎ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ, ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ ಮಾತನಾಡಿದರು.

ಇದಕ್ಕೂ ಮೊದಲು ಸಸಿಗೆ ನೀರುಣಿಸುವ ಮೂಲಕ ಮಾಸ್ಟರ ಕಿಶನ್, ಧ್ರುವ ಎಂ. ಪಾಟೀಲ ಮತ್ತು ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ, ಎಸ್.ಪಿ.ಪಿ.ಎ ಸಂಘಟನೆಯ ಧ್ಯೇಯೋದ್ಧೇಶಗಳು ಮತ್ತು ಸಮಾಜ ಸೇವೆ ಕುರಿತು ಕಿರು ವಿಡಿಯೋ ಪ್ರದರ್ಶನ ನಡೆಯಿತು. ಅಲ್ಲದೇ, ಪರಿಸರ ಸಂರಕ್ಷಣ,ೆ ಸಸ್ಯ ಮತ್ತು ಪ್ರಾಣಿಗಳ ರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಕೈಗೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಅರ್ಜುಣಗಿ, ಕಾತ್ರಾಳ, ಹೆಬ್ಬಾಳಟ್ಟಿ, ಯಕ್ಕುಂಡಿ, ಯಕ್ಕುಂಡಿ ತೋಟದ ಶಾಲೆ ಸೇರಿದಂತೆ ಎಂಟು ಶಾಲೆಗಳು ಮತ್ತು ಒಂದು ಪಿಯು ಕಾಲೇಜಿನ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್. ಎಚ್. ನಾಗೂರ, ವಿಜಯಪುರ ಗ್ರಾಮೀಣ ವಲಯ ಬಿಇಓ ಪ್ರಮೋದಿನಿ ಬಳೂಲಮಟ್ಟಿ, ಅರ್ಜುಣಗಿ ಗ್ರಾ. ಪಂ. ಅಧ್ಯಕ್ಷ ರಫೀಕ ಸೋನಾರ, ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ ತಂಬಾಕೆ, ಗ್ರಾಮದ ಮುಖಂಡರಾದ ಸುರೇಶ ದೇಸಾಯಿ, ಉಮಾಕಾಂತ ತಡಾಕೆ, ಮಲ್ಲಪ್ಪ ಕೆಂಪವಾಡ, ಅಶೋಕ ಕಾಖಂಡಕಿ ಮುಂತಾದವರು ಉಪಸ್ಥಿತರಿದ್ದರು.

ನಿರ್ಮಲಾ ವಿ. ದೊಡಮನಿ ಸ್ವಾಗತಿಸಿದರು. ರಮೇಶ ಕುಂಬಾರ ನಿರೂಪಿಸಿದರು. ಎ. ಎಸ್. ಬಿರಾದಾರ ವಂದಿಸಿದರು.

 

Nimma Suddi
";