ಬೆಂಗಳೂರು: ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು,ಪತಂಜಲಿ ಸಂಸ್ಥೆ ಜನರಿಗೆ ಪುರಾವೆ ಇಲ್ಲದೆಯೇ ದಾರಿತಪ್ಪಿಸುತ್ತಿದೆ. ರೋಗ ಗುಣಪಡಿಸುವ ಲಕ್ಷಣ ಇಲ್ಲದಿದ್ದರೂ ಆಯುರ್ವೇದ ಎಂದು ಮಾರಾಟ ಮಾಡುತ್ತಿದೆ ಎಂದರು.
ಪತಂಜಲಿ ಸಂಸ್ಥೆಗೆ ಸುಪ್ರೀಂ ಕೋರ್ಟ್ ತರಾಟ ವಿಚಾರವಾಗಿ ಮಾತನಾಡಿ, ಜನರಿಗೆ ದಾರಿ ತಪ್ಪಿಸಿ ಕಂಪನಿಗೆ ಲಾಭ ಮಾಡಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿದ್ದರು. ಆಧಾರ ರಹಿತ ಮಾಹಿತಿಗಳನ್ನು ಯಾವುದೇ ಸಂಶೋಧನೆ ಇಲ್ಲದೆಯೇ ಪ್ರಚಾರ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಪತಂಜಲಿ ಉತ್ಪನ್ನಗಳನ್ನು ಪರೀಕ್ಷೆ ನಡೆಸಲು ನಮ್ಮಲ್ಲೂ ಡ್ರಗ್ಸ್ ಕಂಟ್ರೋಲ್ ಹಾಗೂ ಆಯುಷ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು.
ಬಾಬ ರಾಮದೇವ್ ಗೆ ಬಿಜೆಪಿಯಿಂದ ಬಹಳ ಬೆಂಬಲ ಸಿಕ್ಕಿದೆ. ಅದು ಬೇರೆ ವಿಚಾರ. ಆದರೆ ಜನರಿಗೆ ಏನೋ ನಂಬಿಕೆ ಮೂಡಿಸಿ ಮೋಸ ಮಾಡುವುದು ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ. ಹಾಗೆ ಮಾಡಿದರೆ ಅದು ದೊಡ್ಡ ಅಪರಾಧ ಆಗಲಿದೆ ಎಂದು ಹೇಳಿದರು.
ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆ ಕೂಡ ಮಾಡುವುದಕ್ಕೆ ಸೂಚನೆ ನೀಡಿದ್ದೇನೆ. ಔಷಧಕ್ಕೆ ಬೇರೆ ಏನಾದ್ರೂ ಬೆರೆಸಲಾಗುತ್ತದೆಯೆ ಎಂಬ ಪರಿಶೀಲನೆ ಮಾಡುತ್ತೇವೆ. ಇದೇ ತರಹ ಕ್ಲೇಮ್ ಮಾಡುವ ಉತ್ಪನ್ನಗಳ ಬಗ್ಗೆಯೂ ಪರಿಶೀಲನೆ ಮಾಡಬೇಕಿದೆ. ಔಷಧಗಳ ಗುಣಮಟ್ಟ ಚೆಕಪ್ ಮಾಡುವುದಕ್ಕೆ ಹೇಳಿದ್ದೇನೆ. ವರದಿ ಬಂದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.