ಬಾಗಲಕೋಟೆ
* ರಾಷ್ಟ್ರ ಸೇವಿಕಾ ಸಮಿತಿ ನೇತೃತ್ವ
* ಉಕ್ಕಿದ ದೇಶಾಭಿಮಾನ
* ಶಿಸ್ತು ಬದ್ಧ ಪಥಸಂಚಲನ
* ಸಾವಿರಾರು ಹೆಜ್ಜೆಗಳ ಸದ್ದು
* ನೆರೆದ ಜನರಿಂದ ಕರತಾಡನ
ಆರೆಸ್ಸೆಸ್ಸೆಸ್ ಮಹಿಳಾ ಘಟದ ರಾಷ್ಟ್ರ ಸೇವಿಕಾ ಸಮಿತಿಯಿಂದ ಸಂಕ್ರಾಂತಿ ಉತ್ಸವ ನಿಮಿತ್ತ ನಡೆದ ಘೋಷ ಸಹಿತ ಪಥ ಸಂಚಲನ ವಿಜೃಂಭಣೆಯಿಂದ ನಡೆದು ದೇಶಾಭಿಮಾನ ಮೆರೆಯಿತು.
ನಗರದಲ್ಲಿ ಭಾನುವಾರ ರಾಷ್ಟ್ರ ಸೇವಿಕಾ ಸಮಿತಿಯಿಂದ ನಡೆದ ಮಹಿಳಾ ಗಣವೇಷಧಾರಿಗಳ ಪಥ ಸಂಚಲನ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಯಿತು. ಪಥಸಂಚಲನದಲ್ಲಿ ಭಾಗವಹಿಸಿದ್ದ ಸಾವಿರಕ್ಕೂ ಅಧಿಕ ಮಹಿಳಾ ಸ್ವಯಂಸೇವಕರು ಶಿಸ್ತಿನ ನಡಿಗೆಯ ಮೂಲಕ ನೆರೆದ ಜನರ ಪ್ರೊತ್ಸಾಹ ಗಿಟ್ಟಿಸಿದರು.
ಪಥ ಸಂಚಲನ ಮಾರ್ಗದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ಬಗೆ ಬಗೆಯ ಅಲಂಕಾರ, ಭಗವಾಧ್ವಜ ಮತ್ತು ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಹಾಗೂ ದೇಶಕ್ಕಾಗಿ ಹುತಾತ್ಮರಾದ ಭಾವಚಿತ್ರಗಳುಳ್ಳ ಕಟೌಟ್‌ಗಳಿಂದ ಆಕರ್ಷಿಸಿದವು.
ಕೇಸರಿಮಯವಾದ ನಗರ
ಪಥ ಸಂಚಲನದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಅಳವಡಿಸಲಾಗಿದ್ದ ಬ್ಯಾನರ್, ತೋರಣಗಳು ಹೊಸ ವಾತಾವರಣ ಸೃಷ್ಟಿಸಿದವು. ಹಳೆಯ ಬಾಗಲಕೋಟೆ ಪ್ರದೇಶದಲ್ಲಿ ಪಥಸಂಚಲನಕ್ಕಾಗಿ ಮನೆಗಳ ಎದುರು ರಂಗೋಲಿ ಬಿಡಿಸಲಾಗಿತ್ತು.
ಕಿಲ್ಲಾ ಪ್ರದೇಶದ ಅಂಬಾಭವಾನಿ ದೇವಸ್ಥಾನದ ಎದುರು ಪಥ ಸಂಚಲನಕ್ಕೆ ಭವ್ಯ ಸ್ವಾಗತ ನೀಡಲಾಯಿತು. ದೇಶಭಕ್ತರು, ಸ್ವಾತಂತ್ರ‍್ಯ ಯೋಧರ ವೇಷ ಧರಿಸಿದ್ದ ಚಿಣ್ಣರು ಪಥ ಸಂಚಲನದ ಆಕರ್ಷಣೆ ಹೆಚ್ಚಿಸಿದರು.
*ಶಿಸ್ತುಬದ್ಧ ಹೆಜ್ಜೆ*
ಆರೆಸ್ಸೆಸ್ ಸಂಸ್ಥಾಪಕರ ಭಾವಚಿತ್ರಗಳನ್ನೊಳಗೊಂಡ ವಾಹನಗಳು ಸಿಂಗರಿಸಲ್ಪಟ್ಟಿದ್ದವು. ಗಣವೇಷಧಾರಿ ಮಹಿಳಾ ಸ್ವಯಂ ಸೇವಕರು ಶಿಸ್ತುಬದ್ಧ ಹಾಗೂ ತಾಳವಾದ್ಯದೊಂದಿಗೆ ಸಾಗುತ್ತಿದ್ದರೆ ಎಲ್ಲೆಲ್ಲೂ ಭಾರತ ಮಾತೆಯ ಘೋಷಣೆ, ಪುಷ್ಪವೃಷ್ಠಿ, ಚಪ್ಪಾಳೆಯೊಂದಿಗೆ ನಗರದ ಜನತೆ ದಾರಿಯುದ್ದಕ್ಕೂ ಸಂಭ್ರಮದಿಂದ ಸ್ವಾಗತಿಸಿದರು.
ಬಸವೇಶ್ವರ ಕಾಲೇಜ್ ಮೈದಾನದಲ್ಲಿ ಸಂಜೆ ೪ಕ್ಕೆ ೨ ತಂಡಗಳು ಪಥ ಸಂಚಲನಕ್ಕೆ ಸಿದ್ದವಾಗಿದ್ದವು. ಘೋಷ್ ವಾದ್ಯ ಆರಂಭಗೊಳ್ಳುತ್ತಿದ್ದಂತೆ ಎರಡು ತಂಡಗಳಲ್ಲಿ ಪ್ರತ್ಯೇಕವಾಗಿ ಪಥಸಂಚಲನ ಆರಂಭಿಸಿದರು.
*ಚಪ್ಪಾಳೆಯ ಸ್ವಾಗತ*
ಒಂದು ತಂಡ ಬಸವೇಶ್ವರ ಕಾಲೇಜ್ ಮೈದಾನದಿಂದ ಆರಂಭಗೊಂಡು ಕರವೀರಮಠ, ಶಿರೂರ ಅಗಸಿ ಮೂಲಕ ಸಾಗಿದರೆ ಮತ್ತೊಂದು ತಂಡ ಸಾಸನೂರ ಪೆಟ್ರೋಲ್ ಬಂಕ್ ಮೂಲಕ ಸಾಗಿ ಎರಡೂ ತಂಡಗಳು ಬಸವೇಶ್ವರ ಸರ್ಕಲ್ ಗೆ ಆಗಮಿಸಿದವು. ನಂತರ ಎರಡೂ ತಂಡಗಳು ಸೇರಿ ಬಸವೇಶ್ವರ ಕಾಲೇಜ್ ಮೈದಾನ ತಲುಪಿದವು. ಸಂಜೆ ೪.೫೦ಕ್ಕೆ ಬಸವೇಶ್ವರ ವೃತ್ತದಲ್ಲಿ ತಂಡಗಳು ಸೇರ್ಪಡೆಗೊಳ್ಳುತ್ತಿದ್ದಂತೆ ಸಾವಿರಾರು ಜನರು ತಟ್ಟಿದ ಚಪ್ಪಾಳೆ ಆಕಾಶದೆತ್ತರಕ್ಕೆ ಕೇಳುವಂತೆ ಮಾಡಿತು.
*ಸಾವಿರಾರು ಜನ ಸಾಕ್ಷಿ*
ಎರಡು ತಂಡಗಳ ಪಥ ಸಂಚಲನದ ಮಾರ್ಗಗಳಲ್ಲಿ ಮುಖ್ಯ ಬೀದಿಗಳಲ್ಲಿ ರಾಷ್ಟ್ರಪ್ರೇಮ ಮೆರೆಯುವ, ಚಿಕ್ಕಮಕ್ಕಳ, ನಾನಾ ಸ್ವಾತಂತ್ರ‍್ಯ ಹೋರಾಟಗಾರರ ವೇಷ ಧರಿಸಿ ಪಥ ಸಂಚಲನಕ್ಕೆ ಸ್ವಾಗತ ಕೋರಿದರು. ಮಾರ್ಗದುದ್ದಕ್ಕೂ ಹೂವು ಹಾಕುವ ಮೂಲಕ ಜನರು ಅಭಿಮಾನ ಸೂಚಿಸಿದರು. ಮೆರವಣಿಗೆಯಲ್ಲಿ ಆರೆಸ್ಸೆಸ್ ಸಂಸ್ಥಾಪಕರ ಫೋಟೊಗಳೊಂದಿಗೆ ಅಶ್ವಾರೂಢ ಸ್ವಯಂ ಸೇವಕರು ಸಂಚರಿಸಿದರು. ಎಲ್ಲ ರಸ್ತೆಗಳ ಎರಡೂ ಬದಿಗಳಲ್ಲಿ ನಿಂತಿದ್ದ ಜನರು ಪಥ ಸಂಚಲನ ವೀಕ್ಷಿಸಿದರು.