ನಿಮ್ಮ ಸುದ್ದಿ ಬಾಗಲಕೋಟೆ
ಇಂದು ಬೆಳಿಗ್ಗೆ ಕೂಡಲಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಚಿತಾ ಭಸ್ಮ ವಿಸರ್ಜನಾ ಕಾರ್ಯಕ್ರಮ ನಡೆಯಿತು.
ಮೊದಲೇ ಚಿತಾಭಸ್ಮ ವಿಸರ್ಜನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪೂಜಾ ಕೈಂಕರ್ಯ ಆರಂಭ ಮಾಡಿ ಅಸ್ಥಿ ವಿಸರ್ಜನೆಗೆ ಬೋಟ್ ವ್ಯವಸ್ಥೆ ಮಾಡಲಾಗಿತ್ತು. ತ್ರಿವೇಣಿ ಸಂಗಮ ಕೂಡಲಸಂಗಮದ ನದಿಯಲ್ಲಿ ಜ್ಞಾನ ಯೋಗಾಶ್ರಮದ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಪೂಜ್ಯರ ಚಿತಾ ಭಸ್ಮ ವಿಸರ್ಜನಾ ಕಾರ್ಯ ನಡೆಯಿತು. ಬೆಳಗ್ಗೆ 7:00 ಗಂಟೆಗೆ ಕೂಡಲ ಸಂಗಮಕ್ಕೆ ಶ್ರೀಗಳ ಚಿತಾ ಭಸ್ಮ ಆಗಮಿಸಿತು.
ಕೃಷ್ಣಾ, ಘಟಪ್ರಭಾ, ಮಲಫ್ರಭಾ ನದಿಗಳ ಸಂಗಮ ತಾಣ ಕೂಡಲ ಸಂಗಮದಲ್ಲಿ ಚಿತಾ ಭಸ್ಮ ವಿಸರ್ಜನೆ ಮಾಡಲಾಯಿತು. ಈ ನಡುವೆ ಚಿತಾಭಸ್ಮ ವಿಸರ್ಜನಾ ಕಾರ್ಯ ಹಿನ್ನೆಲೆ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಭಕ್ತರ ದಂಡು ಹರಿದು ಬಂದಿತ್ತು.
ಇನ್ನು ತ್ರಿವೇಣಿ ಸಂಗಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮ ವಿಸರ್ಜನೆಯ ಬಳಿಕ ಸ್ವಾಮೀಜಿಗಳು ವಿಶೇಷ ವಾಹನದಲ್ಲಿ ಗೋಕರ್ಣದತ್ತ ಪ್ರಯಾಣ ಬೆಳೆಸಿದ್ದಾರೆ. ಸಾಯಂಕಾಲ 5ರ ಸುಮಾರಿಗೆ ಗೋಕರ್ಣ ತಲುಪಲಿದ್ದು ಅಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಲಿದ್ದಾರೆ.