ಬೆಂಗಳೂರು: ರಾಜ್ಯದಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವಂತ ಜನರಿಗೆ, ಆಶಾಕಿರಣ ಯೋಜನೆಯ ಅಡಿಯಲ್ಲಿ ಉಚಿತವಾಗಿ ತಪಾಸಣೆ ಮಾಡಿ, ಕನ್ನಡಕ ಕೂಡ ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಆಶಾಕಿರಣ ಯೋಜನೆಯಡಿ 8 ಜಿಲ್ಲೆಗಳಲ್ಲಿ ಎಲ್ಲ ಜನರ ಕಣ್ಣಿನ ತಪಾಸಣೆ ಬಹುತೇಕ ಪೂರ್ಣಗೊಂಡಿದ್ದು, ದೃಷ್ಟಿ ದೋಷ ಹೊಂದಿರುವ ಸುಮಾರು 2.45 ಲಕ್ಷ ಜನರಿಗೆ ಉಚಿತವಾಗಿ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ನಾಳೆ ಚಾಲನೆ ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಆಶಾಕಿರಣ” ಯೋಜನೆ ದೃಷ್ಟಿ ದೋಷ ಹೊಂದಿದ ಅನೇಕ ಜನಸಾಮಾನ್ಯರ ಪಾಲಿಗೆ ಬೆಳಕಾಗಲಿದ್ದು, ಯೋಜನೆಯನ್ನ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸುವುದಾಗಿ ತಿಳಿಸಿದರು.
ಹಾವೇರಿಯಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ಅವರು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆಶಾಕಿರಣ ಯೋಜನೆಯಡಿ ರಾಜ್ಯದ 8 ಜಿಲ್ಲೆಗಳಲ್ಲಿ ಎಲ್ಲ ಜನರ ಕಣ್ಣಿನ ತಪಾಸಣಾ ಕಾರ್ಯವನ್ನ ಆಶಾ ಕಾರ್ಯಕರ್ತೆಯರು ನಡೆಸಿದ್ದರು. ಮೊದಲ ಹಂತದಲ್ಲಿ ಹಾವೇರಿ, ಕಲಬುರಗಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 56, 59, 036 ಜನರನ್ನು ಆಶಾ ಕಾರ್ಯಕರ್ತೆಯರ ಮೂಲಕ ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿತ್ತು. ಇವರಲ್ಲಿ 8,28, 884 ಜನರಿಗೆ ನೇತ್ರ ಸಂಬಂಧಿ ತೊಂದರೆಗಳು ಕಂಡುಬಂದಿದ್ದು, ದ್ವಿತೀಯ ಹಂತದ ಚಿಕಿತ್ಸೆಗೆ ಒಳಪಡಿಸಿದಾಗ 2,45,588 ಮಂದಿಗೆ ದೃಷ್ಟಿ ದೋಷ ಇರುವುದು ಪತ್ತೆಯಾಗಿದೆ. 2.45,588 ಜನರಿಗೂ ಉಚಿತ ಕನ್ನಡಕ ಒದಗಿಸುವ ಕಾರ್ಯ ನಾಳೆಯಿಂದ ಪ್ರಾರಂಭವಾಗಲಿದೆ.
39,336 ಜನರಿಗೆ ಕಣ್ಣಿನ ಪೊರೆ ತೊಂದರೆ ಕಂಡು ಬಂದಿದ್ದು, ಇವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನೂ ಕೂಡಾ ಉಚಿತವಾಗಿ ಮಾಡಲಾಗುವುದು “ಆಶಾಕಿರಣ” ಎತಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಶಾಕಿರಣ ಅಭಿಯಾನವನ್ನ ಈಗಾಗಲೇ ಆರಂಭಿಸಲಾಗಿದ್ದು, ಈ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 5,277,235 ಜನರನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ 943,398 ಜನರಲ್ಲಿ ನೇತ್ರ ಸಂಬಂಧಿ ತೊಂದರೆಗಳಿರುವುದು ಪತ್ತೆಯಾಗಿದ್ದು, ಕನ್ನಡಕ ವಿತರಣೆ, ಶಸ್ತ್ರ ಚಿಕಿತ್ಸೆ ಸೇರಿದಂತೆ ಹೆಚ್ಚಿನ ಚಿಕಿತ್ಸೆಗೆ ಕ್ರಮ ವಹಿಸುದಾಗಿ ಎಂದು ಸೂಚಿಸಿದರು.