ನಿಮ್ಮ ಸುದ್ದಿ ಬಾಗಲಕೋಟೆ
ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಯಿಂದಾಗಿ ಮಲಪ್ರಭಾ ನದಿಯ ಬೆನ್ನಿಹಳ್ಳದಿಂದ ನೀರು ನುಗ್ಗಿರುವ ಬಾದಾಮಿ ಪಟ್ಟಣ ಹಾಗೂ ಚೊಳಚಗುಡ್ಡ ಗ್ರಾಮಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಬುಧವಾರ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಬಾದಾಮಿ ಪಟ್ಟಣದ ಆಶ್ರಯ ಕಾಲೋನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಲುವೆ ನೀರಿನಿಂದ ಆಶ್ರಯ ಕಾಲೋನಿಯಲ್ಲಿರುವ 225 ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಬಾದಾಮಿ ತಹಶೀಲ್ದಾರ ಜೆ.ಬಿ.ಮಜ್ಜಗಿ ಅವರಿಂದ ಮಾಹಿತಿ ಪಡೆದುಕೊಂಡರು ಮನೆಗಳಿಗೆ ನೀರು ನುಗ್ಗಿ ಗೃಹಪಯೋಗಿ ವಸ್ತುಗಳು ಹಾಳಾಗಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಕುಟುಂಬಕ್ಕೆ 10 ಸಾವಿರ ರೂ. ತುರ್ತು ಪರಿಹಾರ ಒದಗಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಚೊಳಚಗುಡ್ಡ ಗ್ರಾಮಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ನುಗ್ಗಿರುವ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿ, ನೀರಿನ ಪ್ರಮಾಣ ಇನ್ನು ಹೆಚ್ಚಾಗುವುದೋ ಇಲ್ಲವೋ ಎಂಬ ಬಗ್ಗೆ ಜಲಾಶಯಗಳಿಂದ ಮಾಹಿತಿ ಪಡೆದುಕೊಂಡು ಮುಂಜಾಗ್ರತಾ ಕ್ರಮವಹಿಸಲು ತಹಶೀಲ್ದಾರರಿಗೆ ಸೂಚಿಸಿದರು. ಗ್ರಾಮದಲ್ಲಿ ಹಾನಿಯಾದ ಮನೆ, ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾದ ಬಗ್ಗೆ ಮಾಹಿತಿ ಪಡೆದುಕೊಂಡರು. ಮುಖ್ಯವಾಗಿ ಗೋವಿನ ಜೋಳ, ಕಬ್ಬು, ಬಾಳೆ ಹಾನಿಯಾಗಿರುತ್ತದೆ. ಹಾನಿಯ ನಿಖರ ವರದಿಗೆ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಲು ತಿಳಿಸಿದರು.
ಭೇಟಿ ಸಂದರ್ಭದಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಉಪ ನಿರ್ದೇಶಕ ಎಚ್.ಬಿ.ಕೊಳೇಕರ, ತಹಶೀಲ್ದಾರ ಜೆ.ಬಿ.ವiಜ್ಜಗಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ, ಕುಳಗೇರಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಿ.ಎನ್.ಬುದ್ನಿ, ಬಾದಾಮಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಆನಂದ ಗೌಡ್ರ ಸೇರಿದಂತೆ ಇತರರು ಇದ್ದರು.