೮೦ ರನ್‌ಗಳ ಅಂತರದಲ್ಲಿ ಗೆಲುವಿನ ನಗೆ
ಬಾಗಲಕೋಟೆ ಮಿಡಿಯಾ ಟೈಗರ್‍ಸ ತಂಡದ ಮುಡಿಗೇರಿದ ಚಾಂಪಿಯನ್ ಪಟ್ಟ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿಯನ್ನು ಬಾಗಲಕೋಟೆ ಮಿಡಿಯಾ ಟೈಗರ್‍ಸ ತಂಡ ೮೦ ರನಗಳ ಭಾರೀ ಅಂತರದಿಂದ ಬಾದಾಮಿ ಚಾಲುಕ್ಯ ವಾರಿಯರ್‍ಸ ತಂಡವನ್ನು ಪರಾಭವಗೊಳಿಸಿ ಗೆಲುವಿನ ನಗೆ ಬೀರಿ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿತು.
ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಬ.ವಿ.ವ. ಸಂಘದ ಬಸವೇಶ್ವರ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಬಾದಾಮಿ ಚಾಲುಕ್ಯ ವಾರಿಯರ್‍ಸ ಪಂದ್ಯದ ವಿರುದ್ಧ ಜಯ ಗಳಿಸಿದ ಬಾಗಲಕೋಟೆ ಮಿಡಿಯಾ ಟೈಗರ್‍ಸ ತಂಡವು ಪ್ರಥಮ ಸ್ಥಾನ ಪಡೆಯುವ ಮೂಲಕ ೧೦,೦೦೧ ರೂ. ಹಾಗೂ ಟ್ರೋಫಿಯೊಂದಿಗೆ ಜಿಲ್ಲಾ ಪತ್ರಕರ್ತರ ಕ್ರಿಕೆಟ ಪಂದ್ಯಾವಳಿಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಬಾದಾಮಿ ಚಾಲುಕ್ಯ ವಾರಿಯರ್‍ಸ ತಂಡವು ದ್ವಿತೀಯ ೫೦೦೧ ರೂ. ಹಾಗೂ ಟ್ರೋಫಿಯೊಂದಿಗೆ ರನ್ನರ್ಸಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸಮನ್ ಆಗಿ ಬಾದಾಮಿ ಚಾಲುಕ್ಯ ವಾರಿಯರ್‍ಸ ತಂಡದ ನಾಯಕ ಅಡಿವೇಂದ್ರ ಇನಾಂದಾರ ಹೊರಹೊಮ್ಮಿದರಲ್ಲದೇ ಮ್ಯಾನ್‌ಆಫ್ ದಿ ಸಿರೀಜನ್ನು ಸಹ ತಮ್ಮ ಮುಡಿಗೇರಿಸಿಕೊಂಡರು. ಉತ್ತಮ ಬಾಲರ್ ಆಗಿ ಇರ್ಫಾನ್ ಪಟೇಲ ಅವರು ಪಡೆದರು. ಮ್ಯಾನ್ ಆಫ್ ದಿ ಪಂದ್ಯದ ಪ್ರಶಸ್ತಿಯನ್ನು ಮಲ್ಲು ಹೊಸಮನಿ ಅವರು ತಮ್ಮ ಮುಡಿಗೇರಿಸಿಕೊಂಡರೆ ಉತ್ತಮ ತಂಡವಾಗಿ ಜಗದೀಶ ಗಾಣಿಗೇರ ನೇತೃತ್ವದ ಬಾಗಲಕೋಟೆ ಪ್ರೆಸ್ ತಂಡ ಹೊರಹೊಮ್ಮಿತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಎಸ್.ಎಂ. ಹಿರೇಮಠ ಅವರು ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಜಿಲ್ಲಾ ಕಾನಿಪ ಅಧ್ಯಕ್ಷ ಆನಂದ ಧಲಬಂಜನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾನಿಪ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ಕಾನಿಪ ಉಪಾಧ್ಯಕ್ಷ ಉಮೇಶ ಪೂಜಾರ, ಪ್ರಧಾನ ಕಾರ್‍ಯದರ್ಶಿ ಶಂಕರ ಕಲ್ಯಾಣಿ ಅವರು ಉಪಸ್ಥಿತರಿದ್ದರು.
ರವಿವಾರದಿಂದ ಜರುಗಿದ ಪಂದ್ಯದಲ್ಲಿ ಜಿಲ್ಲೆಯ ೯ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯಲ್ಲಿ ಆರಂಭದಿಂದಲೂ ತೀವ್ರ ಪೈಪೋಟಿಯಲ್ಲಿ ಸೆಣೆಸಾಡಿದ ಪತ್ರಕರ್ತರ ತಂಡಗಳು ಅಂತಿಮವಾಗಿ ಬಾಗಲಕೋಟೆ ಮಿಡಿಯಾ ಟೈಗರ್‍ಸ ಮತ್ತು ಬಾದಾಮಿ ಚಾಲುಕ್ಯ ವಾರಿಯರ್‍ಸ ತಂಡಗಳು ಫೈನಲ ಪ್ರವೇಶಿಸಿದವು.
ಸೋಮವಾರ ಬೆಳಿಗ್ಗೆ ೭ ಗಂಟೆಗೆ ನಡೆದ ಫೈನಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರವಿರಾಜ ಗಲಗಲಿ ನೇತೃತ್ವದ ಬಾಗಲಕೋಟೆ ಮೀಡಿಯಾ ಟೈಗರ್‍ಸ ತಂಡವು ನಿಗಧಿತ ೮ ಓವರ್ ಗಳಲ್ಲಿ ಭಾರಿ ಮೊತ್ತದ ೧೨೦ ರನ್ನಗಳ ಸವಾಲನ್ನು ಅಡವೇಂದ್ರ ಇನಾಂದಾರ ನೇತೃತ್ವದ ಬಾದಾಮಿ ಚಾಲುಕ್ಯ ವಾರಿಯರ್‍ಸ ತಂಡಕ್ಕೆ ನೀಡಿತು. ಈ ಸವಾಲಿನ ಗುರಿಯನ್ನು ತಲುಪಲು ಮೈದಾನಕ್ಕಿಳಿದ ಬಾದಾಮಿ ಚಾಲುಕ್ಯ ವಾರಿಯರ್‍ಸ ತಂಡವು ನಿಗಧಿತ ೮ ಓವ್ಹರಗಳಲ್ಲಿ ಕೇವಲ ೪೦ ರನ್‌ಗಳನ್ನು ಸಂಗ್ರಹಿಸಿ ಬಾಗಲಕೋಟೆ ಮಿಡಿಯಾ ಟೈಗರ್‍ಸ ತಂಡಕ್ಕೆ ಶರಣಾಯಿತು.
ಬಾಗಲಕೋಟೆ ಮಿಡಿಯಾ ಟೈಗರ್‍ಸ ತಂಡವು ೮೦ ರನ್‌ಗಳ ಭಾರೀ ಮೊತ್ತದಿಂದ ಗೆದ್ದು ಬಾಗಲಕೋಟೆ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ ಪಂದ್ಯಾವಳಿಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿತು.
ಕ್ರೀಡಾಕೂಟವನ್ನು ಆರ್.ಎಂ. ಸಗರ ನೇತೃತ್ವದಲ್ಲಿ ಉದಯ ಅಂಗಡಿ, ಎಸ್.ಜಿ. ಉಜ್ವಲ, ಸಂಗಮ ರಾಠಿ, ಶ್ರೀಶೈಲ ಹೊಸಮನಿ, ಮಂಜುನಾಥ ಅವರು ಶಿಸ್ತುಬದ್ಧವಾಗಿ ನಡೆಸಿಕೊಟ್ಟರು. ಕಾನಿಪ ಜಿಲ್ಲಾ ಖಜಾಂಚಿ ಜಗದೀಶ ಗಾಣಿಗೇರ ಸ್ವಾಗತಿಸಿ ಕೊನೆಗೆ ವಂದಿಸಿದರು.