ಬೆಂಗಳೂರು: ಕಳೆದ 30-40 ವರ್ಷಗಳಲ್ಲಿ ಇಂತಹ ಬರ ನೋಡಿರಲಿಲ್ಲ. 6,900 ಬೋರ್ ವೆಲ್ನಲ್ಲಿ ನೀರು ಬರುತ್ತಿಲ್ಲ. ಕುಡಿಯುವ ನೀರಿಗಾಗಿ ಸಾಕಷ್ಟು ತೊಂದರೆಯಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗುತ್ತಿದ್ದು, ಕುಡಿಯುವ ನೀರಿನ ದಂಧೆ ಮಾಡಲಾಗುತ್ತಿತ್ತು, ಅದಕ್ಕೆ ಕಡಿವಾಣ ಹಾಕಲಾಗಿದೆ ಎಂದು ಬೆಂಗಳೂರು ನಿಗಮ ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಲಂಗಳಿಗೆ ಪೂರೈಕೆ ಮಾಡುವ ನೀರಿಗೂ ದರ ನಿಗದಿ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ನೀರಿನ ಮಾಫಿಯಾ ನಿಲ್ಲಿಸಿದ್ದೇವೆ. ನಮಗೆ ಮುಂದಿನ ಎರಡು ತಿಂಗಳು ಹೆಚ್ಚು ಮುಖ್ಯವಾಗಿದ್ದು, ಪೊಲೀಸನವರಿಗೆ, ಆರ್ಟಿಒ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತಾಗುವಂತೆ ರಿಜಿಸ್ಟರ್ ನಂಬರ್ ಹಾಕಿಸಲಾಗಿದೆ. ಬೆಂಗಳೂರು ರಾಮನಗರ ಮಾಗಡಿ ದೊಡ್ಡಬಳ್ಳಾಪುರ ಎಲ್ಲೆಲ್ಲಿ ಬೋರ್ವೆಲ್ ಬಗ್ಗೆ ಲೆಕ್ಕಾಚಾರ ಹಾಕಿದ್ದೇವೆ ಎಂದು ತಿಳಿಸಿದರು.
ಇನ್ನು ತಮಿಳುನಾಡಿಗೆ ನೀರು ಬಿಡುವ ಮಾತೇ ಇಲ್ಲ. ತೊರೆಕಾಡನಹಳ್ಳಿಯಲ್ಲಿ ನೀರಿನ ಮಟ್ಟ ಕಡಿಮೆ ಆಗಿತ್ತು. ಆ ನೀರನ್ನು ಅನಿವಾರ್ಯವಾಗಿ ತುಂಬಿಸಬೇಕಿತ್ತು. ಅದಕ್ಕೆ ಪ್ರತ್ಯೇಕ ಲೇನ್ ಇದೆ, ಹೋಗಿ ನೋಡಿದರೆ ಗೊತ್ತಾಗುತ್ತೆ. ನೀರು ಬಿಡುವುದು, ಎಲ್ಲೆಲ್ಲಿಗೆ ನೀರು ಹೋಗುತ್ತಿದೆ ಎಲ್ಲದಕ್ಕೂ ಲೆಕ್ಕವಿದೆ ಎಂದು ವಿವರಿಸಿದರು.