ಕಲಬುರಗಿ: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಜೆಡಿಎಸ್ ಬಿಜೆಪಿಯಲ್ಲಿ ವಿಲೀನ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಒಂದು ವೇಳೆ, ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗದಿದ್ದರೆ ಬಿಜೆಪಿಯವರೇ ಜೆಡಿಎಸ್‌ನವರನ್ನು ದೂರ ಓಡಿಸುತ್ತಾರೆಂದು ತಿಳಿಸಿದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಆಗಲಿವೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಾಗೇನೂ ಆಗಲ್ಲ. ಒಂದು ವೇಳೆ ಏನಾದರೂ ಆಗುವುದೇ ಇದ್ದರೆ ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದು ಬೀಳಲಿದೆ ಅಷ್ಟೆ ಎಂದು ಹೇಳಿದರು.
ಇದೇ ವೇಳೆ ಕಲ್ಯಾಣ ಕರ್ನಾಟಕದ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ಶಕ್ತಿಯನ್ನು ಕಲಬುರಗಿ ಕೊಟ್ಟಿದೆ ಎಂದ ಅವರು, ಈ ಬಾರಿಯೂ ಬಹಳ ಆತ್ಮವಿಶ್ವಾಸದಿಂದ ನಾವು ಚುನಾವಣೆ ನಡೆಸುತ್ತಿದ್ದೇವೆ ಎಂದರು.
ಮಾಲೀಕಯ್ಯ ಗುತ್ತೇದಾರ್ ನಮ್ಮ ಆತ್ಮೀಯ ಸ್ನೇಹಿತರಾಗಿದ್ದು, ಬಂಗಾರಪ್ಪನವರ ಕಾಲದಿಂದಲೂ ಜತೆಗೆ ಕೆಲಸ ಮಾಡಿದ್ದೇವೆ. ಒಟ್ಟಿಗೆ ಶಾಸಕರಾಗಿ, ಮಂತ್ರಿಯಾಗಿಯೂ ಕೆಲಸ ಮಾಡಿದ್ದೇವೆ. ಬಿಜೆಪಿಯಲ್ಲಿ ಅವರಿಗೆ ಅನ್ಯಾಯವಾಗಿದೆ. ಹೀಗಾಗಿ ಅವರು ನಮ್ಮನ್ನು ಭೇಟಿ ಮಾಡಿದ್ದಾರೆ. ಆದರೆ ಕೆಲ ಆಂತರಿಕ ವಿಚಾರಗಳನ್ನು ಹೇಳಲು ಆಗುವುದಿಲ್ಲ ಎಂದು ಇದೇ ವೇಳೆ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.