ಬೆಳಗಾವಿ:ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಕುರಿತು ಬಿಜೆಪಿ ನಾಯಕರು ತಮ್ಮ ನಿಲುವೇನು ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕುಟುಂಬ, ಅವರ ಪಕ್ಷ ಏನು ಬೇಕಾದರೂ ಹೇಳಲಿ. ಆದರೆ, ಬಿಜೆಪಿ ನಿಲುವು ಏನು ಎಂಬುವುದು ನನ್ನ ಪ್ರಶ್ನೆ. ಜಗದೀಶ ಶೆಟ್ಟರ್, ಮಂಗಲ ಅಂಗಡಿ ಬಗ್ಗೆ ಬಿಜೆಪಿ ನಾಯಕರಿಗೆ ಕೇಳಿ ನಿಮ್ಮ ನಿಲುವು ಏನು?. ಜೆಡಿಎಸ್ ಶಾಸಕರ ಪತ್ರದ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಬಿಜೆಪಿ ಮೈತ್ರಿಯ ನಿಲುವು ಏನು ಎಂಬುವುದು ನಮ್ಮ ಪ್ರಶ್ನೆ ಎಂದರು.
ಪ್ರಜ್ವಲ್ ಪ್ರಕರಣ ಸಂಬಂಧ ಈಗಾಗಲೇ ತನಿಖಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರ, ಆರ್.ಅಶೋಕ ಸೇರಿದಂತೆ ಬಿಜೆಪಿ ನಾಯಕರು ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಕಾನೂನು ವ್ಯವಸ್ಥೆ ಎಲ್ಲಿ ಹದಗೆಟ್ಟಿದೆ ಎಂದು ಪ್ರಧಾನಿ ಹೇಳಬೇಕು. ಬೇರೆ ರಾಜ್ಯಕ್ಕೆ ಹೋಲಿಸಿದರೇ ನಮ್ಮದು ಅತ್ಯಂತ ಸುರಕ್ಷಿತ ರಾಜ್ಯ. ಅಟಲ್ ಬಿಹಾರಿ ವಾಜಪೇಯಿ ಬೆಂಗಳೂರು ಬಗ್ಗೆ ಹೇಳಿದ್ದು, ವಿಶ್ವದ ನಾಯಕರು ಬೆಂಗಳೂರಿಗೆ ಬಂದು ದೆಹಲಿಗೆ ಹೋಗುತ್ತಾರೆ. ನಿಮಗೆ ನಮ್ಮ ರಾಜ್ಯದಲ್ಲಿ ಮತ ಬರಲಿಲ್ಲ ಎಂದು ಮಾತನಾಡಿದರೇ ಇಡೀ ಭಾರತ ಬಗ್ಗೆ ನೀವು ಮಾತನಾಡಿದ ಹಾಗೆ. ಭಾರತದಲ್ಲಿ ಕರ್ನಾಟಕ ಇದೆ. ಪ್ರಧಾನಿ ಮೋದಿ ಆರೋಪ ಸರಿಯಿಲ್ಲ. ಉತ್ತಮ ಆಡಳಿತ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ ಎಂದು ಶಿವಕುಮಾರ್ ಹೇಳಿದರು.