ಬೆಂಗಳೂರು: ಮೂರು ಬಾರಿ ಸಂಸದನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದೀರಿ ನಾಲ್ಕನೇ ಬಾರಿ ಅಗ್ನಿಪರೀಕ್ಷೆಯಲ್ಲಿ ವಿರಾಮ ಕೊಟ್ಟಿದ್ದೀರಿ. ಮತದಾರ ಪ್ರಭುಗಳು ಕೊಟ್ಟಿರೋ ತೀರ್ಮಾನ ಸ್ವಾಗತಿಸುತ್ತೇನೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಿಕೆ ಸುರೇಶ್ ಮಾಧ್ಯಮದ ಮೂಲಕ ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಿದರು.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಸಬರು ಚೆನ್ನಾಗಿ ಕೆಲಸ ಮಾಡಲಿ ಕ್ಷೇತ್ರಕ್ಕೆ ಒಳ್ಳೆಯದಾಗಲಿ. ಕಾರ್ಯಕರ್ತರೊಂದಿಗೆ ನಾನು ಜೊತೆಯಾಗಿರುತ್ತೇನೆ. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು. ನಾನು ಸೋಲನ್ನ ಸ್ವೀಕರಿಸಿದ್ದೇನೆ. ಗೆಲ್ಲುವ ವಿಶ್ವಾಸ ಇತ್ತು ಆದರೆ ಜನ ಬೇರೆ ತೀರ್ಮಾನ ಕೊಟ್ಟಿದ್ದಾರೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಸೋಲಾಯ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ರಾಜಕೀಯದಲ್ಲಿ ತಂತ್ರ ಕುತಂತ್ರ ಕೆಲಸ ಮಾಡುತ್ತೆ, ಅದನ್ನ ಅವರು ಮಾಡಿದ್ದಾರೆ. ನಾನು ಮೊದಲಿನಿಂದಲೂ ಕಾರ್ಯಕರ್ತರ ಜೊತೆ ಇದ್ದವನು, ಈಗಲೂ ಇರ್ತೇನೆ ಮುಂದೆಯೂ ಹೋರಾಟ ಮಾಡುತ್ತೇನೆ. ಈ ಬಾರಿ ಇಂಡಿಯಾ ಒಕ್ಕೂಟಕ್ಕೆ ಒಳ್ಳೆಯ ನಂಬರ್ ಬಂದಿದೆ. ನಾವು 400 ಗೆಲ್ತೇವೆ ಎಂದು ಬಿಜೆಪಿಯವರು ಹೇಳಿಕೊಂಡಿದ್ರು. ಮಾಧ್ಯಮಗಳು ಹೇಳಿದ್ದ ಚುನಾವಣೋತ್ತರ ಸಮೀಕ್ಷೆಗಳು ಸಹ ಸುಳ್ಳಾಗಿದೆ ಎಂದರು.
ನನಗೆ ಅವಕಾಶ ಕೊಟ್ಟ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಗೆಲುವು ಪಡೆದ ಡಾ ಮಂಜುನಾಥ ಅವರಿಗೂ ಧನ್ಯವಾದ ಹೇಳಿದರು.