ಬೆಂಗಳೂರು : ಪ್ರಜ್ವಲ್ ರೇವಣ್ಣ ಅವರ ಪ್ರಕರಣ ದೇಶದ ಅತಿದೊಡ್ಡ ಮಾನಹಾನಿ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣ. ಇದಕ್ಕೆ ಪ್ರಧಾನಿ ಮೋದಿ ಹಾಗೂ ದೇವೇಗೌಡರ ಕುಟುಂಬವೇ ನೇರ ಹೊಣೆ ಎಂದು ಸಂಸದ ಡಿ.ಕೆ.ಸುರೇಶ್ ಅವರು ನೇರ ವಾಗ್ದಾಳಿ ನಡೆಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು,, ನಮಗೆ ಮೊದಲೇ ಗೊತ್ತಿತ್ತು ಎಂದು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಪ್ರಜ್ವಲ್ ಅವರ ತಂದೆ ರೇವಣ್ಣ ಅವರೇ ಹಳೆಯ ವಿಡಿಯೋಗಳು ಎಂದು ಒಪ್ಪಿಕೊಂಡಿದ್ದಾರೆ. ಎಲ್ಲದಕ್ಕೂ ಮೊದಲು ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಿರುವುದು ಸರ್ಕಾರದ ಮೊದಲ ಕೆಲಸ. ಇಲ್ಲಿ ಸುಮಾರು 500 ಕ್ಕೂ ಹೆಚ್ಚು ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ ಎಂದು ಹೇಳಿದರು.
ಇದು ಮನುಕುಲದ ದೊಡ್ಡ ಅವಮಾನಕರ ಘಟನೆ. ಸಂಸ್ಕೃತಿ ಬಗ್ಗೆ ಮಾತನಾಡುವ ಇವರು ಈ ಪ್ರಕರಣದ ಬಗ್ಗೆ ಮಾತನಾಡಲಿ. ನೇಹಾ ಪ್ರಕರಣವನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದಂತೆ, ಈ ಪ್ರಕರಣವನ್ನು ತೆಗೆದುಕೊಂಡು ಹೋಗಲಿ. ಈ ಪ್ರಕರಣದ ಹಿಂದೆ ಇರುವ ಎಲ್ಲರಿಗೂ ಶಿಕ್ಷೆಯಾಗಬೇಕು. ಇದರಲ್ಲಿ ಸಿಲುಕಿಕೊಂಡಿರುವ ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ರಕ್ಷಣೆ ಕೊಟ್ಟು, ಕಾಪಾಡಬೇಕು ಎಂದು ವಿವರಿಸಿದರು.
ಇದೊಂದೆ ಪ್ರಕರಣವಲ್ಲ ಮಹಿಳಾ ಕುಸ್ತಿಪಟುಗಳ ಮೇಲಿನ ದೌರ್ಜನ್ಯ ಪ್ರಕರಣದಲ್ಲೂ ಪ್ರಧಾನಿಗಳು ಬಾಯಿ ಬಿಡಲಿಲ್ಲ. ಯಡಿಯೂರಪ್ಪ ಅವರನ್ನು ಇಳಿಸಿದಾಗಲೂ ಬಾಂಬೆ ಬ್ಲೂ ಬಾಯ್ಸ್ ಪ್ರಕರಣದಲ್ಲೂ ಇದೇ ರೀತಿಯ ಮಾತುಗಳು ಕೇಳಿಬಂದವು. ಇದನ್ನೆಲ್ಲಾ ನೋಡಿದರೆ ಅನೇಕ ಪ್ರಕಣಗಳಲ್ಲಿ ಬಿಜೆಪಿಯವರಿಗೆ ನಂಟಿದ್ದು, ಅನೇಕ ಪ್ರಕರಣಗಳನ್ನು ಬಿಜೆಪಿಯವರು ಮುಚ್ಚಿಟ್ಟಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ಸಜ್ಜಾಗಿದೆ ಎಂದರು.
ನಮಗೆ ವಿಷಯ ಗೊತ್ತಿದ್ದರೇ ಈ ವಿಚಾರ ಇನ್ನು ಮುಂಚೆಯೇ ವಿಷಯ ಹೊರ ಬರುತ್ತಿತ್ತು. ಆರೋಪ ಮಾಡುವುದಕ್ಕಾಗಿ ನಮ್ಮ ಹೆಸರುಗಳನ್ನು ತರಲಾಗುತ್ತಿದೆ. ಗುಸು ಗುಸು ಸುದ್ದಿ ಹಾಸನದಲ್ಲಿ ಇತ್ತು, ಸೂಕ್ತ ದಾಖಲೆಗಳು ಇಲ್ಲದೇ ಮಾತನಾಡುವುದು ಸೂಕ್ತವಲ್ಲ. ಹಾಸನದ ಬಿಜೆಪಿ ನಾಯಕ ದೇವರಾಜೇಗೌಡ ಉನ್ನತ ನಾಯಕರಿಗೆ ಪತ್ರ ಬರೆದಿದ್ದರು. ಪ್ರಕರಣದ ಬಗ್ಗೆ ಪ್ರಧಾನಿಗಳು ಹಾಗೂ ಅವರ ಕಾರ್ಯಾಲಯ ಮತ್ತು ಕುಟುಂಬಕ್ಕೆ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಎನ್ ಡಿಎ ಅಭ್ಯರ್ಥಿಯನ್ನಾಗಿ ಮಾಡಿ. ಇಡೀ ದೇಶದಲ್ಲೇ ಕನ್ನಡಿಗರಿಗೆ, ಹಾಸನ ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂದು ಸೂಚಿಸಿದರು.