ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಸಹೋದರರದ್ದು ‘420 ಕುಟುಂಬ’ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಸುರೇಶ್ ತೀಕ್ಷ್ಣ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬದ ಆಸ್ತಿ ಪೆನ್ಡ್ರೈವ್ ಆಗಿದೆ. ಇನ್ನು ತೆನೆ ಹೊತ್ತ ಮಹಿಳೆ ಪೆನ್ಡ್ರೈವ್ ಹೊರಬೇಕಾಗುತ್ತದೆ. ಇದು ಪೆನ್ಡ್ರೈವ್ ಕುಟುಂಬ ಎಂದು ಡಿಕೆ ಸುರೇಶ್ ಲೇವಡಿ ಮಾಡಿದರು.
ಎಲ್ಲವನ್ನೂ ದೇಶ ಹಾಗೂ ರಾಜ್ಯದ ಜನ ಗಮನಿಸುತ್ತಿದ್ದಾರೆ. ಬೇಕಿದ್ದರೆ ಅವರಿಗೆ ಮನಸ್ಸಿಗೆ ಬಂದಹಾಗೆ ಬೈದುಕೊಳ್ಳಲಿ. ಹಾಸನದ ಹೆಣ್ಮಕ್ಕಳ ಮರ್ಯಾದೆ ಉಳಿಸಬೇಕು ಅಷ್ಟೇ. ನಾವು ಅವರನ್ನ ಕೆಣಕಿಲ್ಲ ಎಂದು ಸುರೇಶ್ ಹೇಳಿದರು.
ಪೆನ್ಡ್ರೈವ್ ಬಿಡುಗಡೆ ಮಾಡಿದ್ದು ಅವರದೇ ಮೈತ್ರಿ ಪಾರ್ಟರ್ನರ್. ಅವರ ಬಗ್ಗೆ ಮಾತನಾಡುವುದಕ್ಕೆ ಕುಮಾರಸ್ವಾಮಿಗೆ ಧೈರ್ಯ ಇಲ್ಲ. ಹಾಗಾಗಿ ನಮ್ಮ ಮೇಲೆ ಮಾತನಾಡುತ್ತಿದ್ದಾರೆ ಎಂದು ಸುರೇಶ್ ಕಿಡಿ ಕಾರಿದರು.
ನಾನು ಅವರ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅದು ಮಾಜಿ ಪ್ರಧಾನಿಗಳ ಕುಟುಂಬ. ಅವರ ಕುಟುಂಬ, ಅಭಿಮಾನಿಗಳಿಗೆ ಬೇಸರ ಆಗಬಹುದು. ದೇವೇಗೌಡರ ಕುಟುಂಬದ ಆಸ್ತಿ ಪೆನ್ಡ್ರೈವ್ ಎಂದು ವ್ಯಂಗ್ಯವಾಡಿದರು.