ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಲ್ಪಸಂಖ್ಯಾತರನ್ನು ಓಲೈಸೋ ರಾಜಕಾರಣ ಹೆಚ್ಚಾಗುತ್ತೆ ಎನ್ನುವ ಆರೋಪ ಕೇಳಿ ಬರುತ್ತಲೇ ಇದ್ದು, ಬಿಜೆಪಿ ಪದೇ ಪದೇ ಇದನ್ನೇ ಹೇಳುತ್ತಿದೆ. ಇದೇ ವೇಳೆ ಹಿಂದೂಪರ ಸಂಘಟನೆಗಳು ಕೂಡ ಇದನ್ನೇ ಆರೋಪಿಸುತ್ತಿವೆ. ಇಂಥ ಆರೋಪಕ್ಕೆ ಪುಷ್ಟಿ ಅನ್ನುವಂತೆ ಇದೀಗ ಧಾರವಾಡದಲ್ಲಿ ಘಟನೆಯೊಂದು ನಡೆದಿದ್ದು ಬೆಳಕಿಗೆ ಬಂದಿದೆ.
ಕೋಟ್ಯಾಂತರ ರೂಪಾಯಿ ಮೌಲ್ಯದ ಜಾಗವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕ್ರಿಶ್ಚಿಯನ್ ಸಮುದಾಯಕ್ಕೆ ಚರ್ಚ್ ನಿರ್ಮಿಸಲು ನೀಡಲು ಉದ್ದೇಶಿಸಿರೋದು ಬೆಳಕಿಗೆ ಬಂದಿದ್ದು, ಇದು ಹಿಂದೂಪರ ಸಂಘಟನೆಗಳ ಕಂಗೆಣ್ಣಿಗೆ ಗುರಿಯಾಗಿದೆ.ವಿವಾದದ ಸಮ್ಮುಖದಲ್ಲಿ ಶ್ರೀರಾಮ ಸೇನೆ ಸಂಘಟನೆ ಸದಸ್ಯರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ್ದು, ಇವರ ಈ ಪ್ರತಿಭಟನೆಗೆ ಕಾರಣ ಧಾರವಾಡ ನಗರದ ಸತ್ತೂರು ಬಡಾವಣೆಯಲ್ಲಿರೋ ಜಾಗವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕ್ರಿಶ್ಚಿಯನ್ ಸಮುದಾಯಕ್ಕೆ ನೀಡಲು ಉದ್ದೇಶಿಸಿರುವುದು. ಇದರಂಗವಾಗಿ ಇದೀಗ ಪತ್ರಿಕೆಗಳಲ್ಲಿ ಜಾಹಿರಾತನ್ನು ನೀಡಿ, ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನಿಸಿದೆ.
1496 ಚದರ ಮೀಟರ್ ಜಾಗೆಯಲ್ಲಿ ಎಲ್-ಷಡ್ಡಾಯ ಟ್ರಸ್ಟ್ ವತಿಯಿಂದ ಧಾರ್ಮಿಕ ಉದ್ದೇಶದ ಪ್ರಾರ್ಥನಾ ಭವನ ಕಟ್ಟಡ ನಿರ್ಮಾಣ ಮಾಡಲು ಕಟ್ಟಡ ಪರವಾನಿಗೆಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಧಾರ್ಮಿಕ ಉದ್ದೇಶದ ಕಟ್ಟಡಗಳಿಗೆ ಪರವಾನಿಗೆ ನೀಡುವ ಪೂರ್ವದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಣೆ ನೀಡಲಾಗಿದೆ. ಆದರೆ ಈ ಜಾಗೆ ಸಾರ್ವಜನಿಕರ ಉಪಯೋಗಕ್ಕಾಗಿ ಇದ್ದು, ಇದನ್ನು ಒಂದು ಸಮುದಾಯದವರಿಗೆ ನೀಡಲು ವಿರೋಧ ವ್ಯಕ್ತವಾಗಿದೆ ಎಂದು ಗಂಗಾಧರ ಕುಲಕರ್ಣಿ, ಶ್ರೀರಾಮ ಸೇನೆ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.ಅಚ್ಚರಿಯ ಸಂಗತಿ ಅಂದರೆ ಇದುವರೆಗೂ ಅಲ್ಲಿ ಯಾವುದೇ ಕಟ್ಟಡವೇ ಇರಲಿಲ್ಲ.
ಆದರೆ ಸುಮಾರು ಐದು ತಿಂಗಳ ಹಿಂದಷ್ಟೇ ಇಲ್ಲಿ ಕಟ್ಟಡವೊಂದರ ನಿರ್ಮಾಣವಾಗಿದ್ದು, ಅದಕ್ಕೂ ಕೂಡ ಯಾವುದೇ ಅನುಮತಿಯನ್ನು ಪಡೆದಿಲ್ಲವಂತೆ. ಇದೇ ಕಾರಣಕ್ಕೆ ಇದೀಗ ಇದರ ವಿರುದ್ಧ ಹೋರಾಟಕ್ಕೆ ಇಳಿದಿರೋ ಹಿಂದೂಪರ ಸಂಘಟನೆ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಈ ಜಾಗೆಯನ್ನು ನೀಡಲು ಅವಕಾಶ ಕೊಡೋದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.