ವಿಜಯಪುರ,
ವಿಜ್ಞಾನಿ ಡಾ. ಕುಶಾಲ ದಾಸ ಅವರು ತಮ್ಮ ಸಾಧನೆಗಳ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಫಿಜಿಯಾಲಜಿ ವಿಭಾಗದ ಡಿಸ್ಟಿಂಗ್ವಿಷ್ಡ್ ಚೇರ್ ಪ್ರೊಫೆಸರ್ ಡಾ. ಕುಶಾಲ ಕೆ. ದಾಸ್ ಅವರಿಗೆ ರಾಜ್ಯ ಸರಕಾರ ವಿಕಲಚೇತನರ ಕ್ಷೇತ್ರದಲ್ಲಿನ ಸೇವೆಗಾಗಿ ರಾಜ್ಯ ಮಟ್ಟದ ವೈಯಕ್ತಿಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಹಿನ್ನೆಲೆಯಲ್ಲಿ ವಿವಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಕುಶಾಲ ಕೆ. ದಾಸ ಅವರನ್ನು ಸನ್ಮಾನಿಸಿ ಸಚಿವರು ಮಾತನಾಡಿದರು.
ಡಾ. ಕುಶಾಲ ಕೆ. ದಾಸ ತಮ್ಮ ಕೆಲಸ ಕಾರ್ಯಗಳ ಮೂಲಕ ಬಿ.ಎಲ್.ಡಿ.ಇ ಸಂಸ್ಥೆಗೆ ಬೆನ್ನೆಲುಬಾಗಿದ್ದಾರೆ. ಸಂಶೋಧನೆಗಳ ಸಾಧನೆಯ ಮೂಲಕ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ನ್ಯೂನ್ಯತೆಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಸಮಸ್ಯೆಗಳನ್ನು ಮೆಟ್ಟಿ ನಿಂತು ಅವರು ಮಾಡಿರುವ ಸಾಧನೆಗಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ಸದಾ ಲವಲವಿಕೆಯಿಂದ ಇರುವ ಅವರು ಯುವ ವೈದ್ಯರು ಮತ್ತು ಸಂಶೋಧಕರಿಗೆ ಮಾದರಿಯಾಗಿದ್ದಾರೆ. ಅವರ ಪ್ರಾಮಾಣಿಕತೆ, ಸೇವೆ, ಸಂಶೋಧನೆ, ಕಾಯಕ ನಿಷ್ಠೆ ಇತರರಿಗೂ ಪ್ರೇರಣೆಯಾಗಿದೆ. ಇಂದಿನ ಯುವ ಪೀಳಿಗೆಗೆ ಅಧ್ಯಯನ ಮತ್ತು ಸಂಶೋಧನೆಯ ಬಗ್ಗೆ ಜಾಗೃತಿ ಮೂಡಿಸಲು ಅವರ ಸೇವೆಯನ್ನು ಬಳಸಿಕೊಳ್ಳಲಾವುದು. ಪ್ರತಿವಾರ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುವುದು ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಕುಶಾಲ ಕೆ. ದಾಸ, ಪಶ್ಚಿಮ ಬಂಗಾಳದಲ್ಲಿ ಜನಿಸಿದ್ದರೂ, ನನ್ನ ಜೀವನದ ಬಹುತೇಕ ಸಮಯ ವಿಜಯಪುರದಲ್ಲಿಯೇ ಕಳೆಯುತ್ತಿದ್ದೇನೆ. ನಾನು ವಿಜಯಪುರದವನಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ರಾಜ್ಯ ಸರಕಾರ ನನ್ನ ಸೇವೆಯನ್ನು ಗುರುತಿಸಿ ಪ್ರಶಸ್ನಿ ನೀಡಿ ಗೌರವಿಸಿರುವುದು ನನ್ನ ಸಂಶೋಧನೆಗಳನ್ನು ಹೆಚ್ಚಿಸಲು ಸ್ಪೂರ್ತಿ ನೀಡಿದೆ. ನನಗೆ ವಹಿಸುವ ಕೆಲಸಗಳನ್ನು ಶ್ರದ್ಧಾಪೂರಕವಾಗಿ ಮಾಡುತ್ತೇನೆ. ನನ್ನ ಕೆಲಸ ಕಾರ್ಯಗಳಿಗೆ ಸಚಿವ ಎಂ. ಬಿ. ಪಾಟೀಲ ಅವರು ಸಂಪೂರ್ಣ ಸಹಕಾರ ನೀಡುತ್ತಿರುವುದು ನನಗೆ ಉತ್ಸಾಹವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಪ್ರಿ-ಪ್ಯಾರಾ ವಿಭಾಗದ ಉಪಪ್ರಾಚಾರ್ಯೆ ಡಾ. ಸುಮಂಗಲಾ ಪಾಟೀಲ, ಫಾರೆನ್ಸಿಕ್ ಮೆಡಿಸೀನ್ ವಿಭಾಗದ ಮುಖ್ಯಸ್ಥ ಡಾ. ಉದಯಕುಮಾರ ಚ. ನುಚ್ಚಿ, ಡಾ. ಶ್ರೀಲಕ್ಷ್ಮಿ ಬಗಲಿ, ಡಾ. ಕುಶಾಲ ಕೆ ದಾಸ್ ಅವರ ಪತ್ನಿ ಡಾ. ಸ್ವಸ್ತಿಕಾ ದಾಸ, ಫಿಜಿಯಾಲಜಿ ಸೇರಿದಂತೆ ನಾನಾ ವಿಭಾಗಗಳ ಪ್ರಾಧ್ಯಾಪಕರು ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಸರಕಾರ ವಿಕಲಚೇತನರ ಕ್ಷೇತ್ರದಲ್ಲಿನ ಸೇವೆಗಾಗಿ ರಾಜ್ಯ ಮಟ್ಟದ ವೈಯಕ್ತಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ವಿಜ್ಞಾನಿ ಡಾ. ಕುಶಾಲ ಕೆ. ದಾಸ ಅವರನ್ನು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ವತಿಯಿಂದ ಸಚಿವ ಎಂ. ಬಿ. ಪಾಟೀಲ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಾ. ಆರ್. ಎಸ್. ಮುಧೋಳ, ಡಾ. ಅರವಿಂದ ಪಾಟೀಲ, ಡಾ. ಸುಮಂಗಲಾ ಪಾಟೀಲ, ಡಾ. ಸ್ವಸ್ತಿಕಾ ದಾಸ ಮುಂತಾದವರು ಉಪಸ್ಥಿತರಿದ್ದರು.