ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮಾಗಮದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ತ್ರಿಬಲ್ ಎಂಜಿನ್ ಗೆಲುವಿನ ಗಾಳಿ ಬೀಸುತ್ತಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಡಾ.ಕೆ.ಸುಧಾಕರ್ ನಡೆಸಿದ ಭರ್ಜರಿ ಪ್ರಚಾರದ ವೇಳೆ ಅವರು ಮಾತನಾಡಿದರು.
ಕಾಂಗ್ರೆಸ್ ಇಂಡಿಯಾ ಕೂಟ ಮಾಡಿಕೊಂಡು ಮಂಡಿಯಲ್ಲಿ ಭಾರತವನ್ನೇ ಮಾರಾಟ ಮಾಡಲು ಮುಂದಾಗಿದೆ. 40 ಸ್ಥಾನಕ್ಕಿಂತ ಹೆಚ್ಚು ಬರಲ್ಲಎನ್ನುವುದು ಗೊತ್ತಿರುವುದರಿಂದ ಹಾಗೂ ಮುಂದಿನ 50 ವರ್ಷ ಅಧಿಕಾರ ಸಿಗದಿರುವುದು ಖಚಿತವಾಗಿರುವುದರಿಂದ ಗ್ಯಾರಂಟಿ ಕಾರ್ಡುಗಳನ್ನು ನೀಡುತ್ತಿದ್ದಾರೆ. 2,000 ರೂ. ಕೊಡುತ್ತಿರುವುದರಿಂದಲೇ ರಾಜ್ಯದ ಸ್ಥಿತಿ ಅಧೋಗತಿಗೆ ಸಾಗಿದೆ. ದೇಶದ ಬೊಕ್ಕಸದಿಂದ ಇದೇ ರೀತಿ ಹಣ ನೀಡಿದರೆ ಇಡೀ ದೇಶ ಹಾಳಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶವನ್ನು ಪಾಕಿಸ್ತಾನಕ್ಕಿಂತ ಹಿಂದಕ್ಕೆ ಕೊಂಡೊಯ್ಯಲಿದೆ ಎಂದರು.
ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿಗೆ ಬಳಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡದೆ ದೆಹಲಿಗೆ ಕಳುಹಿಸಲಾಗಿದೆ. ದಲಿತರ ಬಗ್ಗೆ ಕಾಂಗ್ರೆಸ್‌ಗೆ ಗೌರವ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಹೇಳಲು ಕಾಂಗ್ರೆಸ್‌ಗೆ ಯೋಗ್ಯತೆ ಮತ್ತು ನೈತಿಕತೆ ಇಲ್ಲ. ಬಾಬಾ ಸಾಹೇಬರನ್ನು ಎರಡು ಬಾರಿ ಸೋಲಿಸಿದ್ದೇ ಕಾಂಗ್ರೆಸ್ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇರುವವರೆಗೂ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲೇ ಉಳಿಯಲಿದೆ. ಬಿಜೆಪಿ ಯಾವಾಗಲೂ ಆಡಳಿತದ ಸ್ಥಾನದಲ್ಲಿದ್ದು ಜನ ಕಲ್ಯಾಣ ಕಾರ್ಯಗಳನ್ನು ಮಾಡಲಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀರಾವರಿಗೆ ಕೊಟ್ಟಷ್ಟು ಕೊಡುಗೆಗಳನ್ನು ಯಾರೂ ಕೊಟ್ಟಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಹೇಳಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ. ಅದರೆ ಮಹಿಳೆಯರಿಗಾಗಿಯೇ ಕುಮಾರಸ್ವಾಮಿ ಅವರು ಸಾರಾಯಿ ನಿಷೇಧ ಮಾಡಿದ್ದರು. ರೈತರ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್‌ಗೆ ಹೇಳಲು ಸಾಧನೆಗಳ ಸರಕು ಇಲ್ಲದೆ ಈ ರೀತಿಯ ತಂತ್ರ ಹೆಣೆಯುತ್ತಿದೆ ಎಂದರು.