ಹಿರೇಕೆರೂರು: ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಏಕ ಪಕ್ಷದ ಆಡಳಿತ ಒಳ್ಳೆಯದು ಎಂದು ದೇಶದ ಜನರು ತೀರ್ಮಾನಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ದೇಶದ ಭದ್ರತೆ, ಏಕತೆ, ಸುರಕ್ಷತೆ ಹಾಗೂ ಅಭಿವೃದ್ಧಿ ಪಥದತ್ತ ಕೊಂಡಯ್ಯುವ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಜತೆಗೆ ಅವರನ್ನು ಮಗದೊಮ್ಮೆ ಪ್ರಧಾನ ಮಂತ್ರಿಯನ್ನಾಗಿಸಲು ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಅಬಲೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದಾಗ ಬರ ಬರುತ್ತದೆ. ಅವರ ಗ್ಯಾರಂಟಿಗಳಲ್ಲಿ ಬರಗಾಲವೂ ಗ್ಯಾರಂಟಿಯಾಗಿದೆ. ರೈತರು ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಬರಪರಿಹಾರ ಹಣ ಬಿಡುಗಡೆ ಮಾಡಿಲ್ಲ, ಮಾತೆತ್ತಿದರೆ ಕೇಂದ್ರದ ಕಡೆ ಬೊಟ್ಟು ತೋರಿಸುವ ಕಾರ್ಯಮಾಡುತ್ತಾರೆ. ರಾಜ್ಯ ಸರ್ಕಾರ ಬಂದು ಹತ್ತು ತಿಂಗಳು ಕಳೆದರೂ ಅನುದಾನ ಬಿಡುಗಡೆ ಮಾಡಿಲ್ಲ. ಈ ಕುರಿತು ಆಡಳಿತ ಪಕ್ಷದವರೇ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದರು.
ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭದ್ರತೆ, ಆರ್ಥಿಕ ಪ್ರಗತಿಗೆ ಹಾಗೂ ಬಡವರು, ರೈತರು, ಮಹಿಳೆಯರಿಗೆ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ದೇಶದ ಭದ್ರತೆಗೆ ಆದ್ಯತೆ ನೀಡಿ ಉಗ್ರರನ್ನು ಮಟ್ಟ ಹಾಕುವ ಕಾರ್ಯ ಮಾಡಿ ದೇಶದ ಜನತೆ ನೆಮ್ಮದಿಯಿಂದ ಇರುವಂತೆ ಮಾಡಿದ ನರೇಂದ್ರ ಮೋದಿ ಅವರನ್ನು ಮಗದೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಜನತೆ ಸಂಕಲ್ಪ ಮಾಡಿದ್ದಾರೆ ಎಂದು ತಿಳಿಸಿದರು.
ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕುಡುಪಲಿ, ಕಡೂರು, ಬುಳ್ಳಾಪೂರ, ಹಳ್ಳೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಈ ಚುನಾವಣೆಯ ಕೇಂದ್ರಬಿಂದುವಾಗಿದ್ದಾರೆ. ಸಾಮಾನ್ಯವಾಗಿ ಎರಡು ವ್ಯಕ್ತಿತ್ವದ ನಡುವೆ ಚುನಾವಣೆಯಾಗುತ್ತದೆ. ಆದರೆ, ಇಲ್ಲಿ ನರೇಂದ್ರ ಮೋದಿ ಪರ ಹಾಗೂ ನರೇಂದ್ರ ಮೋದಿ ವಿರುದ್ಧ ಚುನಾವಣೆ ನಡೆಯುತ್ತಿದೆ. ದೇಶದಲ್ಲಿ ನರೇಂದ್ರ ಮೋದಿಯಂತಹ ವ್ಯಕ್ತಿತ್ವ ಬೇರೆ ಯಾರೂ ಇಲ್ಲ ಎಂದು ಹೇಳಿದರು.