ಲೋಕಸಭೆ ಚುನಾವಣೆಯ ನೀತಿಸಂಹಿತೆಯಿಂದ ಜಾನುವಾರು ಸಂತೆಗೆ ಬಿಸಿ ತಟ್ಟಿದೆ. ಮೇವಿನ ಕೊರತೆಯಿಂದ ಬಹಳಷ್ಟು ರೈತರು ದನಕರುಗಳನ್ನು ಮಾರಾಟ ಮಾಡಲು ಮುಂದಾಗಿದ್ದರೂ ದಾಖಲೆಗಳಿಲ್ಲದ ಹಣ ಸಾಗಿಸಬಾರದೆಂಬ ನಿಯಮದಿಂದ ಜಾನುವಾರುಗಳ ಖರೀದಿ- ಮಾರಾಟದ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಜಾನುವಾರುಗಳನ್ನು ಸಾಕಲೂ ಆಗದೆ, ಮಾರಲೂ ಆಗದೆ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪ್ರಸಕ್ತ ವರ್ಷ ಜಾನುವಾರುಗಳಿಗೆ ಮೇವು ಮತ್ತು ನೀರಿನ ತೀವ್ರ ಅಭಾವ ಎದುರಾಗಿದೆ.
ಕೃಷಿ ಬೆಳೆಗಳೂ ಕೈಕೊಟ್ಟಿದ್ದರಿಂದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ದುಪ್ಪಟ್ಟು ಹಣ ಕೊಟ್ಟು ಮೇವು ತಂದು ಜಾನುವಾರುಗಳನ್ನು ಸಾಕುವ ಸಾಮರ್ಥ್ಯ ರೈತರಲ್ಲಿಉಳಿದಿಲ್ಲ. ಹಾಗಾಗಿ ಹೆಚ್ಚಿನ ರೈತರು ಜಾನುವಾರುಗಳನ್ನು ಮಾರುವುದೇ ಸೂಕ್ತ ಎಂದು ನಿರ್ಧರಿಸುತ್ತಿದ್ದಾರೆ. ಜಾನುವಾರುಗಳನ್ನು ಕೊಡು- ಕೊಳ್ಳುವ ವ್ಯವಹಾರ ಯಾವುದೇ ದಾಖಲೆಗಳಿಲ್ಲದೆ ಕೇವಲ ಬಾಯಿಮಾತಿನಲ್ಲೇ ನಡೆಯುತ್ತದೆ. ಇದಕ್ಕೆ ಕೃಷಿ ಉತ್ಪನ್ನದಿಂದ ಬಂದ ಹಣವನ್ನೇ ಬಳಸಲಾಗುತ್ತದೆ.
ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಮೂಡಲಗಿ, ಶುಕ್ರವಾರ ಸಂಕೇಶ್ವರ, ಸೋಮವಾರ ಹುಕ್ಕೇರಿ ಮತ್ತು ರಾಯಬಾಗದಲ್ಲಿ ಜಾನುವಾರುಗಳ ಸಂತೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಈ ಸಂತೆಗಳಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ನಾನಾ ಭಾಗಗಳಿಂದ ವ್ಯಾಪಾರಸ್ಥರು ಜಾನುವಾರು ಖರೀದಿಗೆ ಬರುತ್ತಾರೆ.
ಇಲ್ಲಿಕೋಟಿಗಟ್ಟಲೆ ವ್ಯವಹಾರ ನಡೆಯುತ್ತದೆ. ಆದರೆ, ನೀತಿಸಂಹಿತೆಯ ಬಿಗಿ ನಿಯಮಗಳು ಜಾರಿಯಾದ ಬಳಿಕ ಸಂತೆಗಳಲ್ಲಿ ಜಾನುವಾರುಗಳನ್ನು ಕೊಳ್ಳುವವರೇ ಕಾಣುತ್ತಿಲ್ಲ. ಮೊದಲೇ ಬರದಿಂದ ಕಂಗೆಟ್ಟಿರುವ ರೈತರು ಸಂತೆಗೆ ತಂದ ಜಾನುವಾರುಗಳು ಮಾರಾಟವಾಗದೆ ನಿರಾಸೆಯಿಂದ ಮರಳಿ ಮನೆಗೆ ತೆಗೆದುಕೊಂಡು ಹೋಗುವುದು ಕಂಡುಬರುತ್ತಿದೆ.
ಪ್ರಸ್ತುತ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ದಾಖಲೆ ಇಲ್ಲದೆ 50 ಸಾವಿರಕ್ಕಿಂತ ಹೆಚ್ಚು ಹಣ ಕೊಂಡೊಯ್ಯುವಂತಿಲ್ಲ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ವೇಳೆ 50 ಸಾವಿರಕ್ಕಿಂತ ಹೆಚ್ಚು ಹಣ ಸಿಕ್ಕರೆ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ವಶಪಡಿಸಿಕೊಂಡ ಹಣಕ್ಕೆ ದಾಖಲೆ ನೀಡಿ ಮರಳಿ ಪಡೆಯುವುದಕ್ಕೆ ಸುದೀರ್ಘ ಸಮಯ ಹಿಡಿಯುತ್ತದೆ. ಇದರಿಂದ ಜಾನುವಾರು ಸಂತೆಗಳಿಗೆ ಖರೀದಿಗೆ ಬರಲು ರೈತರು, ದಲ್ಲಾಳಿಗಳು ಹಿಂದೇಟು ಹಾಕುತ್ತಿದ್ದಾರೆ.