ಬೆಂಗಳೂರು: ಕಲಬುರಗಿ ಸಂಸದ ಉಮೇಶ್ ಜಾಧವ್ ಬೆಂಬಲಿಗ, ಬಿಜೆಪಿ ಮುಖಂಡ ಗಿರೀಶ್ ಚಕ್ರ ಕೊಲೆಯಾದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕರ್ನಾಟಕ ಬಿಜೆಪಿ ವಾಗ್ದಾಳಿ ನಡೆಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಉಸ್ತುವಾರಿ ಅವಧಿಯಲ್ಲಿ ಜಿಲ್ಲೆಯಲ್ಲಿ ಕೊಲೆ ಸುಲಿಗೆಗಳದ್ದೇ ದರ್ಬಾರು ನಡೆಯುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಬಿಜೆಪಿ, ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರ ಉಸ್ತುವಾರಿ ಅವಧಿಯಲ್ಲಿ ಕಲಬುರಗಿಯಲ್ಲಿ ಕೇವಲ ಕೊಲೆ-ಸುಲಿಗೆಗಳದ್ದೇ ದರ್ಬಾರು. ಪ್ರಿಯಾಂಕ್ ಉಸ್ತುವಾರಿ ಸಚಿವರಾದ ಈ 10 ತಿಂಗಳಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಸಾಲು ಸಾಲಾಗಿ ಹತ್ಯೆಗೀಡಾಗುತ್ತಿದ್ದಾರೆ.
ಕಲಬುರಗಿಯನ್ನು ತಮ್ಮ ಪುಂಡ ಪೋಕರಿ ಪಟಾಲಂಗೆ ಒಪ್ಪಿಸಿರುವ ಸಚಿವ ಪ್ರಿಯಾಂಕ್ ಖರ್ಗೆಯವರೇ ನೇರ ಹೊಣೆ. ಮಹಾಂತಪ್ಪ ಆಲೂರೆಯವರ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಬಿಜೆಪಿ ಮುಖಂಡ ಗಿರೀಶ್ ಚಕ್ರರವರನ್ನು ಸಹ ಹತ್ಯೆಗೈಯಲಾಗಿದೆ’ ಎಂದು ಬಿಜೆಪಿ ಉಲ್ಲೇಖಿಸಿದೆ.
ಸಿಎಂ ಸಿದ್ದರಾಮಯ್ಯ ಅವರೇ, ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣ ಹಳ್ಳ ಹಿಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಮೊದಲು ಸಂಪುಟದಿಂದ ವಜಾ ಮಾಡಿ ಎಂದು ಬಿಜೆಪಿ ಆಗ್ರಹಿಸಿದೆ.ಗಿರೀಶ್ ಚಕ್ರ ಅವರನ್ನು ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಬಿಎಸ್ಎನ್ಎಲ್ ಸಲಹಾ ಸಮಿತಿ ನಿರ್ದೇಶಕರನ್ನಾಗಿ ಗಿರೀಶ್ ಅವರನ್ನು ಸಂಸದ ಉಮೇಶ್ ಜಾಧವ್ ನೇಮಕ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವುದಾಗಿ ನಂಬಿಸಿ ಗಿರೀಶ್ ಚಕ್ರ ಅವರನ್ನು ಸ್ನೇಹಿತರೇ ಜಮೀನಿಗೆ ಕರೆಸಿದ್ದರು. ಜಮೀನಿಗೆ ಬಂದ ಗಿರೀಶ್ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಗಿರೀಶ್ ಚಕ್ರ ಕೊಲೆ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಸಂಸದ ಉಮೇಶ್ ಜಾಧವ್ ಸೇರಿದಂತೆ ಬಿಜೆಪಿ ನಾಯಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.