ಬೆಂಗಳೂರು: ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಬಂದಿರುವುದು ನಿಜ. ನಾವು ನಿಮಗೆ ಟಿಕೆಟ್ ಕೊಡುತ್ತೇವೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಆಹ್ವಾನ ಬಂದಿತ್ತು. ಆದರೆ ನಾನು, ಕಾಂಗ್ರೆಸ್ ಸೇರಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಹೇಳಿದರು.
ಬೆಂಗಳೂರಿನ ಸಂಜಯ ನಗರ ನಿವಾಸದಲ್ಲಿ ಗುರುವಾರ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಡಿವಿ ಸದಾನಂದ ಗೌಡ, ‘ನಾನು ಪಕ್ಷ ಶುದ್ದೀಕರಣ ಮಾಡುವತ್ತ ಗಮನ ಹರಿಸುತ್ತೇನೆ’ ಎಂದು ಹೇಳಿದರು.
ಟಿಕೆಟ್ ಕೈತಪ್ಪಿದ್ದರಿಂದ ನೋವಾಗಿದ್ದು ನಿಜ. ಆದರೆ ನನ್ನ ಈ ಸ್ಥಿತಿಗೆ ಕಾರಣರಾದವರು ಪಶ್ಚಾತ್ತಾಪ ಅನುಭವಿಸುತ್ತಾರೆ ಎಂದರು.
ನಾನು ಪಕ್ಷಕ್ಕಾಗಿ ಕೆಲಸ ಮಾಡಿದ ನಿಷ್ಠಾವಂತ ಕಾರ್ಯಕರ್ತ. ನಾನು ಸಿಂಗಲ್ ಮ್ಯಾನ್ ಆರ್ಮಿ ಅಲ್ಲ. ಪಕ್ಷದಲ್ಲಿ ಒಂದಷ್ಟು ಜನರು ಶುದ್ಧೀಕರಣ ಬಯಸುತ್ತಿದ್ದಾರೆ. ಅವರನ್ನು ಕ್ರೋಢೀಕರಿಸಲಾಗುತ್ತದೆ ಎಂದು ಡಿವಿಎಸ್ ವಿವರಿಸಿದರು.
ಪಕ್ಷದ ಜವಾಬ್ದಾರಿ ವಹಿಸಿದವರು ಸ್ವಾರ್ಥಿಗಳಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬ, ಮಕ್ಕಳು, ಜಾತಿ, ತನ್ನವರಿಗೆ ಸೀಮಿತ ಮಾಡಿದ್ದಾರೆ. ಮೋದಿಯವರ ಮೇರಾ ದೇಶ್ ಮೇರಾ ಪರಿವಾರ್ ಆಗಬೇಕು ಬಿಜೆಪಿ ಎಂದು ಅಭಿಪ್ರಾಯಪಟ್ಟರು. ಆದರೆ, ಅದು ಆಗುತ್ತಿಲ್ಲ ಎಂದು ಬೇಸರ ಹೊರಹಾಕಿದರು.
“ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ವಾತಾವರಣ ಸೃಷ್ಟಿಯಾಗಬೇಕು. ಅವರು ಪರಿವರ್ತನೆಯ ಹರಿಕಾರ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಜನರ ಪರವಾದ ಹಾಗೂ ಜನರು ಒಪ್ಪಿಕೊಳ್ಳುವ ಪಕ್ಷವಾಗಬೇಕು,” ಎಂದು ಸದಾನಂದ ಗೌಡ ತಿಳಿಸಿದರು.
ಮೋದಿ, ಬಿಜೆಪಿ ಕರ್ನಾಟಕದಲ್ಲಿ ಇರಬೇಕು. ಪರಿವಾರವಾದ, ಭ್ರಷ್ಟಾಚಾರವಾದ, ಜಾತಿವಾದ ಮುಕ್ತವಾದ ಪಕ್ಷ ಬಿಜೆಪಿ ಆಗಬೇಕು. ಶುದ್ದೀಕರಣದ ಅಭಿಯಾನಕ್ಕೆ ವೇಗ ಕೊಡಲು ನನ್ನಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.