ಬೆಂಗಳೂರು: ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಕೆ ಮಾಡುವ ಅಧಿಕಾರವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಮತ್ತು ಬಿವೈ ರಾಘವೇಂದ್ರ ಮಧ್ಯೆ ಮೋದಿ ಫೋಟೋ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದರು.
ಬರ ಪರಿಹಾರ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ವಿಳಂಬ ಮಾಡಿದೆ. ರಾಜ್ಯ ಸರ್ಕಾರ ವಿಳಂಬ ಮಾಡಿ ನಂತರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಬನ್ನಿ ಎನ್ನುತ್ತಾರೆ. ಯಾಕೆ ಸಂಸತ್ನಲ್ಲಿ ಕಾಂಗ್ರೆಸ್ ಪಕ್ಷ ಸತ್ತು ಹೋಗಿದ್ಯಾ? ಕಾಂಗ್ರೆಸ್ಸಿಗರಿಗೆ ಸಾಮರ್ಥ್ಯ ಇಲ್ಲ ಅಂತ ತೀರ್ಮಾನಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ನವರು ತೀರ್ಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈಶ್ವರಪ್ಪಗೆ ಮೋದಿ ಫೋಟೋ ಬಳಕೆ ಮಾಡಿಕೊಳ್ಳುವ ಅಧಿಕಾರವಿಲ್ಲ. ಅವರು ಬಳಕೆ ಮಾಡಿದರೆ ಅದು ತಪ್ಪು. ಸರ್ಕಾರಿ ಕಾರ್ಯಕ್ರಮ ಆಗಿದ್ದರೆ ಪ್ರಧಾನಿ ಆಗಿರುವುದರಿಂದ ಮೋದಿ ಫೋಟೊ ಬಳಸಿಕೊಳ್ಳಬಹುದು. ಆದರೆ, ರಾಜಕೀಯವಾಗಿ ಚುನಾವಣೆ ವೇಳೆ ಬಿಜೆಪಿಗೆ ಮಾತ್ರ ಮೋದಿ ಫೋಟೊ ಬಳಕೆಗೆ ಅಧಿಕಾರ ಇದೆ. ಈಶ್ವರಪ್ಪ ಅನಧಿಕೃತವಾಗಿ ಮೋದಿಯವರ ಫೋಟೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ನಾಮಪತ್ರ ಸಲ್ಲಿಸಿದ ಬಳಿಕ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್ ಹೇಳಿದರು.